ಗುಂಡ್ಯದಲ್ಲಿ ತಲೆಯೆತ್ತಲಿದೆ ಆನೆ ಶಿಬಿರ !
ಕಾಡಾನೆಗಳ ದಾಳಿಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರ ಜತೆಗೆ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಭಾಗದ ಗುಂಡ್ಯ ಹೊಳೆಯ ಸಮೀಪ ಆನೆ ಶಿಬಿರ ಆರಂಭಿಸಲು ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಮಂಗಳೂರು: ದಕ್ಷಿಣ ಕನ್ನಡ –ಹಾಸನ ಜಿಲ್ಲೆಯ ಗಡಿಭಾಗ, ಸುಬ್ರಹ್ಮಣ್ಯ ಅರಣ್ಯ ವಲಯದ ಕೊಂಬಾರು ರಕ್ಷಿತಾರಣ್ಯ ಪ್ರದೇಶವಾದ ಗುಂಡ್ಯ ಹೊಳೆಯ ಸಮೀಪ ಆನೆ ಶಿಬಿರ ಆರಂಭಿಸಲು ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕಾಡಾನೆಗಳ ದಾಳಿಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರ ಜತೆಗೆ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಗುಂಡ್ಯ ಪ್ರದೇಶವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಸುಬ್ರಹ್ಮಣ್ಯ ಹಾಗೂ ಧರ್ಮಶ್ಥಳಗಳಿಗೆ ಹತ್ತಿರವಿದ್ದು,ಇಲ್ಲಿ ದುಬಾರೆ ಆನೆ ಕ್ಯಾಂಪ್ ಮಾದರಿಯಲ್ಲೇ ಅಭಿವೃದ್ಧಿಪಡಿಸಬಹುದು. ಕಡಬ ತಾಲ್ಲೂಕಿನ ಶಿರಿಬಾಗಿಲು ಗ್ರಾಮದ ಗುಂಡ್ಯದಲ್ಲಿ ಕಾಡಾನೆ ಪಳಗಿಸುವ ಶಿಬಿರ ಸ್ಥಾಪಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು, ಕೊಡಗಿನ ದುಬಾರೆಯಲ್ಲಿ ಆನೆ ಶಿಬಿರಗಳಿದ್ದು, ಹೊಸದಾಗಿ ಕೊಡಗಿನ ಮತ್ತಿಗೋಡು, ಹಾರಂಗಿಯಲ್ಲಿ ಆರಂಭಿಸಲಾಗಿದೆ. ಉತ್ತರ ಕನ್ನಡದ ದಾಂಡೇಲಿಯ ಘನಸೋಲಿಯಲ್ಲಿ, ಬಂಡೀಪುರದ ರಾಂಪುರದಲ್ಲಿ ಆನೆ ಶಿಬಿರಗಳಿವೆ. ಇವು ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿವೆ. ಆನೆಗಳ ದಾಳಿ ಕಡಿಮೆಯಾಗುತ್ತದೆ ಎನ್ನುವ ಲೆಕ್ಕಾಚಾರವೂ ಈ ಉದ್ದೇಶದ ಹಿಂದಿದೆ.
ಅಲ್ಲದೆ ಆನೆ ಶಿಬಿರಕ್ಕೆ ಸುಮಾರು 40 ಎಕ್ರೆ ಜಾಗ ಬೇಕು. ಪ್ರತೀ ಆನೆಗೆ ತಲಾ ಒಬ್ಬ ಮಾವುತ, ಒಬ್ಬ ಕಾವಡಿ ಬೇಕು. ಇವರ ಮುಖ್ಯಸ್ಥನಾಗಿ ಜಮೇದಾರ ಇರುತ್ತಾನೆ. ಉಪ ವಲಯ ಅರಣ್ಯಾಧಿಕಾರಿಗೆ ಶಿಬಿರದ ಮೇಲುಸ್ತುವಾರಿ. ಶಿಬಿರದಲ್ಲಿ ಆನೆಯನ್ನು ಪಳಗಿಸುವ ಜಾಗ, ಅವುಗಳ ಆಹಾರ-ವಿಹಾರಕ್ಕೆ ಅರಣ್ಯ ಪ್ರದೇಶ, ಸ್ನಾನ, ಕುಡಿಯುವ ನೀರಿಗೆ ಪೂರಕವಾಗಿ ನದಿ ಇರಬೇಕು. ಕಚೇರಿ, ತರಬೇತಿ ಪಡೆದ ಸಿಬಂದಿ, ವಾಹನ ಇತ್ಯಾದಿ ಅಗತ್ಯವಿದೆ.
ʼಆನೆಗಳ ಸಂಚಾರ, ಆನೆ ದಾಳಿಗಳ ಪ್ರಕರಣಗಳು ಮಂಗಳೂರು ವಿಭಾಗದಲ್ಲಿಯೇ ಹೆಚ್ಚು.. ಹಾಗಾಗಿ ನಮ್ಮ ವಿಭಾಗ ವ್ಯಾಪ್ತಿಯ ಗುಂಡ್ಯದಲ್ಲಿ ನದಿಯೂ ಇರುವ ಕಾರಣ ಆನೆ ಶಿಬಿರ ಸ್ಥಾಪನೆಗೆ ಉಪಯುಕ್ತ ಜಾಗವಾಗಿದೆ. ಈ ಸ್ಥಳದಲ್ಲೇ ಆನೆ ಕ್ಯಾಂಪ್ ಸ್ಥಾಪನೆ ಕೋರಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.ʼ ಎಂದು ಮಂಗಳೂರು ವಿಭಾಗ ಡಿಸಿಎಫ್ ಆ್ಯಂಟನಿ ಮರಿಯಪ್ಪ ಹೇಳಿದ್ದಾರೆ.