ಬನ್ನೇರುಘಟ್ಟದ ಆನೆಗಳಿಗೀಗ ಜಪಾನ್ ಪ್ರವಾಸ ಭಾಗ್ಯ
ಮೈಸೂರು ಮೃಗಾಲಯದಿಂದ ಮೇ 2021ರಲ್ಲಿ ಜಪಾನ್ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಿದ ಬಳಿಕ, ಎರಡನೇ ಬಾರಿ ಜಪಾನ್ ಜತೆ ಪ್ರಾಣಿಗಳ ವಿನಿಮಯ ಕಾರ್ಯ ನಡೆದಿದೆ.
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಇದೇ ಮೊದಲ ಬಾರಿಗೆ ನಾಲ್ಕು ಆನೆಗಳನ್ನು ಜಪಾನಿನ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ಕಳುಹಿಸಲಾಗುತ್ತಿದೆ. ದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮೋದನೆ ಹಾಗೂ ಇತರ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪ್ರಮಾಣ ಪತ್ರದ ಪ್ರಕಾರ, ಒಂದು ಗಂಡು ಮತ್ತು ಮೂರು ಹೆಣ್ಣಾನೆ ಸೇರಿದಂತೆ ನಾಲ್ಕು ಏಷ್ಯಾ ಆನೆಗಳನ್ನು ಜಪಾನಿಗೆ ಕಳುಹಿಸಲಾಗುತ್ತಿದೆ.
ಆನೆಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಸಾಕಾದ ಕಾನ್ಸೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್ ಏರ್‌ವೇಸ್‌ನ ಸರಕು ವಿಮಾನದ ಮೂಲಕ ಸಾಗಿಸಲಾಯಿತು. ವಿಮಾನದ ಮೂಲಕ ಬೆಂಗಳೂರಿನಿಂದ ಜಪಾನಿನ ಹಿಮೇಜಿ ಸಫಾರಿ ಪಾರ್ಕ್‌ಗೆ ತಲಪಲು ಸುಮಾರು 20 ಗಂಟೆಗಳ ಕಾಲ ಪ್ರಯಾಣಿಸಬೇಕಿದೆ. ಕಳೆದ 6 ತಿಂಗಳುಗಳಿಂದ ಈ ಸಾಗಣೆಗಾಗಿ ಪ್ರಾಣಿಗಳಿಗೆ ತರಬೇತಿ ನೀಡಲಾಗಿದೆ. ಆನೆಗಳು ಉತ್ತಮ ಆರೋಗ್ಯ ಹೊಂದಿದ್ದು ಪ್ರಯಾಣ ಮಾಡಲು ಸಬಲವಾಗಿವೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನೆಗಳನ್ನು ಜಪಾನಿಗೆ ಕಳುಹಿಸಿಕೊಟ್ಟಿರುವುದಕ್ಕೆ ಪ್ರತಿಯಾಗಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳು ಬರಲಿವೆ. ಈ ಬಗ್ಗೆ ಮಾತನಾಡಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್, ಏಷ್ಯನ್ ಆನೆಗಳ ಸೇರ್ಪಡೆಯು ಹಿಮೇಜಿ ಸೆಂಟ್ರಲ್ ಪಾರ್ಕ್ -ಸಫಾರಿ ಪಾರ್ಕ್‌ಗೆ ವಿಶೇಷ ಆಕರ್ಷಣೆಯಾಗಲಿದೆ. ಜಪಾನಿಯರು ಏಷ್ಯನ್ ಆನೆಗಳನ್ನು ಹತ್ತಿರದಿಂದ ಕಾಣಲು ಇದು ಉತ್ತಮ ಅವಕಾಶ ಎಂದಿದ್ದಾರೆ.
ಮೈಸೂರು ಮೃಗಾಲಯದಿಂದ ಮೇ 2021ರಲ್ಲಿ ಜಪಾನ್ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಿದ ಬಳಿಕ, ಎರಡನೇ ಬಾರಿ ಜಪಾನ್ ಜತೆ ಪ್ರಾಣಿಗಳ ವಿನಿಮಯ ಕಾರ್ಯ ನಡೆದಿದೆ. ಹಿಮೇಜಿ ಸಫಾರಿ ಪಾರ್ಕ್‌ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಬ್ಬರು ಪಶು ವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವ ಶಾಸ್ತ್ರಜ್ಞೆ ಆನೆಗಳ ಜತೆ ಪ್ರಯಾಣಿಸುತ್ತಿದ್ದಾರೆ.