ಪ್ರಾಣಿ ಸಂಪತ್ತಿನ ಸಾಂಪ್ರದಾಯಿಕ ಜಾಗ ಒತ್ತುವರಿಯೇ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣ: ಕೆ.ವಿ.ಪಿ
ಪತ್ರಿಕೋದ್ಯಮವು ಕೇವಲ ರಾಜಕೀಯ ಮತ್ತು ಅಪರಾಧ ಸುದ್ದಿಗಳ ಸುತ್ತ ಸುತ್ತುತ್ತಿರುವ ಈ ಹೊತ್ತಿನಲ್ಲಿ ಪರಿಸರ ಪತ್ರಿಕೋದ್ಯಮದ ಬಗ್ಗೆಯೇ ವಿಚಾರಗೋಷ್ಠಿ ಏರ್ಪಡಿಸಿದ್ದು ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ. ಬರುವ ದಿನಗಳಲ್ಲಿ ಪರಿಸರ ಬಿಕ್ಕಟ್ಟು ತೀವ್ರಗೊಳ್ಳಲಿದ್ದು, ಈ ಸವಾಲನ್ನು ಎದುರಿಸಲು ಮಾಧ್ಯಮಗಳು ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಕೆ.ವಿ.ಪ್ರಭಾಕರ್ ಹೇಳಿದರು.
ಅಭಿವೃದ್ಧಿ ಹೆಸರಿನ ಪರಿಸರ ನಾಶ ಗಂಭೀರವಾದ ಸಂಗತಿಯಾಗಿದ್ದು, ಪ್ರಾಣಿ ಸಂಪತ್ತಿನ ಸಾಂಪ್ರದಾಯಿಕ ಜಾಗ ಒತ್ತುವರಿಯೇ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಆಯೋಜಿಸಿದ್ದ "ಪರಿಸರ ಪತ್ರಿಕೋದ್ಯಮ ಸಂಭ್ರಮ" ವಿಚಾರಗೋಷ್ಠಿಯಲ್ಲಿ ಸಮಾರೋಪ ಮಾತುಗಳನ್ನಾಡಿದರು. ಇದು ಕೇವಲ ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿರದೆ, ಇಂದಿನ ಪರಿಸರ ಬಿಕ್ಕಟ್ಟಿನ ಕಾಲದಲ್ಲಿ ಮಾಧ್ಯಮಗಳ ಜವಾಬ್ದಾರಿಯನ್ನು ನೆನಪಿಸುವ ಮಹತ್ವದ ವೇದಿಕೆಯಾಗಿದೆ ಎಂದರು. ಪತ್ರಕರ್ತರಾಗುವವರಿಗೆ ನೋಟ ಮತ್ತು ಗ್ರಹಿಕೆ ಬಹಳ ಮುಖ್ಯ. ಒಂದು ಸಂಗತಿಯನ್ನು ಹೇಗೆ ನೋಡುತ್ತೇವೆ, ಹೇಗೆ ಗ್ರಹಿಸುತ್ತೇವೆ ಎನ್ನುವುದು ಪತ್ರಕರ್ತನ ವೃತ್ತಿಪರತೆಯನ್ನು ನಿರ್ಧರಿಸುತ್ತದೆ ಎಂದರು.
ಇದನ್ನೂ ಓದಿ: ಬನ್ನೇರುಘಟ್ಟ ಉದ್ಯಾನವನಕ್ಕೆ ನಾಲ್ಕು ವಿದೇಶಿ ಅತಿಥಿಗಳ ಆಗಮನ
ಈ ಎರಡು ದಿನಗಳ ವಿಚಾರಗೋಷ್ಠಿಯು ಪರಿಸರ ಮತ್ತು ಪತ್ರಿಕೋದ್ಯಮದ ನಡುವಿನ ಕೊಂಡಿಯನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಒಳನೋಟಗಳನ್ನು ಒದಗಿಸಿದೆ. ಇಂದು ಜನಸಾಮಾನ್ಯರಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವ ಅಗತ್ಯ ಇಲ್ಲ. ಏಕೆಂದರೆ ಪರಿಸರದ ಮೇಲಾಗುತ್ತಿರುವ ದೌರ್ಜನ್ಯದ ಅಡ್ಡ ಪರಿಣಾಮಗಳಿಗೆ ಮೊದಲ ಬಲಿ ಆಗುತ್ತಿರುವವರೇ ಜನ ಸಾಮಾನ್ಯರು. ಹೀಗಾಗಿ ಪತ್ರಕರ್ತರು ಜನರಿಗೆ ತಿಳಿವಳಿಕೆ ಹೇಳುವುದಕ್ಕಿಂತ ಹೆಚ್ಚಾಗಿ ಅವರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಮಾಧ್ಯಮ ವಿದ್ಯಾರ್ಥಿಗಳು ಪರಿಸರ ವರದಿಗಾರಿಕೆಯಲ್ಲಿರುವ ಸವಾಲುಗಳು ಮತ್ತು ಅವಕಾಶಗಳನ್ನು ಅರಿತುಕೊಳ್ಳಬೇಕು. ತುಮಕೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪರಿಸರ ಸಮಸ್ಯೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಬಿಂಬಿಸಬೇಕು, ಸ್ಥಳೀಯವಾಗಿ ನಡೆಯುವ ಪರಿಸರ ಹೋರಾಟಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೋರಾಟಗಳ ಜತೆ ಬೆಸೆಯುವ ಮೂಲಕ ಸ್ಥಳೀಯ ಹೋರಾಟಗಳಿಗೆ ನೈತಿಕ ಮತ್ತು ಜಾಗತಿಕ ಶಕ್ತಿ ಒದಗಿಸುವ ಅಗತ್ಯವಿದೆ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶವನ್ನು ಪ್ರಶ್ನಿಸುವ ಧೈರ್ಯವನ್ನು ಪತ್ರಿಕೋದ್ಯಮ ತೋರಿಸಬೇಕು. ಕೇವಲ ನಕಾರಾತ್ಮಕ ಸುದ್ದಿಗಳ ಬದಲಿಗೆ, ಪರಿಸರ ಹೋರಾಟ ಮತ್ತು ಪರಿಸರ ಸಂರಕ್ಷಣೆಯ ಯಶಸ್ವಿ ಹೋರಾಟಗಳ ಮಾದರಿಗಳನ್ನು ಸ್ಥಳೀಯ ಮಟ್ಟದಲ್ಲೂ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು. ಪತ್ರಕರ್ತರಿಗೆ ದೇಶದ ಪರಿಸರ ಕಾಯ್ದೆಗಳ ಬಗ್ಗೆ ಕನಿಷ್ಠ ಜ್ಞಾನವಿರಬೇಕು, ಆಗ ಮಾತ್ರ ಅಕ್ರಮ ಗಣಿಗಾರಿಕೆ ಅಥವಾ ಅರಣ್ಯ ಒತ್ತುವರಿಯಂಥ ಪ್ರಕರಣಗಳನ್ನು ಸಮರ್ಥವಾಗಿ ವರದಿ ಮಾಡಲು ಸಾಧ್ಯ. ಸಾಮಾಜಿಕ ಜಾಲತಾಣಗಳನ್ನು ಪರಿಸರ ಜಾಗೃತಿಯ ಅಭಿಯಾನಗಳನ್ನು ರೂಪಿಸಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಿ ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮವು ಕೇವಲ ರಾಜಕೀಯ ಮತ್ತು ಅಪರಾಧ ಸುದ್ದಿಗಳ ಸುತ್ತ ಸುತ್ತುತ್ತಿರುವ ಈ ಹೊತ್ತಿನಲ್ಲಿ ಪರಿಸರ ಪತ್ರಿಕೋದ್ಯಮದ ಬಗ್ಗೆಯೇ ವಿಚಾರಗೋಷ್ಠಿ ಏರ್ಪಡಿಸಿದ್ದು ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ. ಬರುವ ದಿನಗಳಲ್ಲಿ ಪರಿಸರ ಬಿಕ್ಕಟ್ಟು ತೀವ್ರಗೊಳ್ಳಲಿದ್ದು, ಈ ಸವಾಲನ್ನು ಎದುರಿಸಲು ಮಾಧ್ಯಮಗಳು ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದರು. ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಇಂಥ ಗೋಷ್ಠಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೈದ್ಧಾಂತಿಕ ತಿಳುವಳಿಕೆಯ ಜತೆಗೆ ಸಾಮಾಜಿಕ ಕಳಕಳಿಯನ್ನು ಬಿತ್ತುವಲ್ಲಿ ಯಶಸ್ವಿಯಾಗುತ್ತಿರುವುದು ಅಭಿನಂದನೀಯ ಎಂದು ಮೆಚ್ವುಗೆ ವ್ಯಕ್ತಪಡಿಸಿದರು.