ಮಿಜೋರಾಂ ರಾಜಧಾನಿ ಐಜ್ವಾಲ್ ಅನ್ನು ದೆಹಲಿಯೊಂದಿಗೆ ಸಂಪರ್ಕಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ‌ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಅಲ್ಲಿನ ಜನತೆಯ ದಶಕದ ಕನಸು ನನಸಾಗಿದೆ. ಅಲ್ಲದೇ ಐಜ್ವಾಲ್‌ ನಗರ ಮೊಟ್ಟ ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲ ಸೇರಿಕೊಂಡಿದೆ. ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಗಿದ್ದ ರೈಲ್ವೆ ಕಾಮಗಾರಿ 11 ವರ್ಷಗಳ ಬಳಿಕ ಪೂರ್ಣಗೊಂಡಿದೆ.

ಮೊದಲು ಸಿಲ್ಚಾರ್‌ನಿಂದ ಐಜ್ವಾಲ್‌ಗೆ 8-10 ಗಂಟೆ ಪ್ರಯಾಣ ಮಾಡಬೇಕಿತ್ತು. ಈಗ ಕೇವಲ 4 ಗಂಟೆಯಲ್ಲಿ ಐಜ್ವಾಲ್‌ ತಲುಪಬಹುದು. ಭಾರತೀಯ ರೈಲ್ವೆ ಈ ನೂತನ ರೈಲು ಮಾರ್ಗವನ್ನು ನಿರ್ಮಿಸಿದ್ದು, ಈ ಯೋಜನೆಗೆ 8,070 ಕೋಟಿ ರು. ವೆಚ್ಚವಾಗಿದೆ. ಈ ನಡುವೆ 2025ರ ಆಗಸ್ಟ್‌ನಲ್ಲಿ ಐಆರ್‌ಸಿಟಿಸಿ ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಅವಧಿಗೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಒಪ್ಪಂದ ಮಾಡಿಕೊಂಡಿದೆ. ಈ ರೈಲ್ವೆ ಯೋಜನೆ ಮಿಜೋರಾಂ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಮನ್ವಂತರ ಸೃಷ್ಟಿಸಲಿದೆ. ಇದರಿಂದ ದೇಶದ ಬೇರೆಬೇರೆ ರಾಜ್ಯಗಳೊಂದಿಗೆ ಸಂಪರ್ಕಕ್ಕೆ ಅನುಕೂಲವಾಗಲಿದ್ದು. ರಾಜ್ಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ.