ಎಂ.ಎಸ್. ಸೆವೆನ್‌ ಸೀಸ್‌ ನ್ಯಾವಿಗೇಟರ್‌ ಐಷಾರಾಮಿ ಕ್ರೂಸ್ ಹಡಗಿನ ಮೂಲಕ ವಿದೇಶಿ ಪ್ರವಾಸಿಗರು ನ್ಯೂ ಮಂಗಳೂರು ಬಂದರಿಗೆ ಆಗಮಿಸಿದ್ದು, ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ ಪ್ರವಾಸಿಗರನ್ನು ಹೊತ್ತ ಕ್ರೂಸ್ ಬೆಳಿಗ್ಗೆ ಮಂಗಳೂರು ಬಂದರಿಗೆ ಬಂದಿತು.

ಈ ಕ್ರೂಸ್‌ ಬಹಾಮಾಸ್‌ನಿಂದ ಹೊರಟಿದ್ದು, ಮಲೇಷ್ಯಾ, ಸಿಂಗಾಪುರ ಮತ್ತು ಶ್ರೀಲಂಕಾ ಮೂಲಕ ಭಾರತವನ್ನು ಪ್ರವೇಶಿಸಿ, ಮೊದಲು ಮಂಗಳೂರಿನಲ್ಲಿ ತಂಗಲಿದೆ, ನಂತರ ಗೋವಾ ಮತ್ತು ದುಬೈ ಮೂಲಕ ವಾಪಸ್ ತೆರಳಲಿದೆ.

ನ್ಯೂ ಮಂಗಳೂರು ಬಂದರು ಪ್ರಾಧಿಕಾರದ (NMPA) ಪರವಾಗಿ ಕಸ್ಟಮ್ಸ್ ಆಯುಕ್ತೆ ವಿನಿತಾ ಶೇಖರ್ ಅವರ ನೇತೃತ್ವದಲ್ಲಿ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಪ್ರವಾಸಿಗರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆಯ ವೆಲ್‌ನೆಸ್ ಕೇಂದ್ರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಉಚಿತ ವೈ-ಫೈ ಸೌಲಭ್ಯ ಒದಗಿಸಲಾಯಿತು.

Luxury Cruise Brings Wave of International Tourists to Mangaluru

ಇದೇ ವೇಳೆ, ಕರಾವಳಿ ಕರ್ನಾಟಕದ ಪ್ರಸಿದ್ಧ ಸಾಂಸ್ಕೃತಿಕ ಕಲೆಯಾದ ಯಕ್ಷಗಾನವನ್ನು ಪ್ರತಿಬಿಂಬಿಸುವ ವಿಶೇಷ ಸೆಲ್ಫಿ ಸ್ಟ್ಯಾಂಡ್‌ನ್ನು ಸ್ಥಾಪಿಸಲಾಗಿತ್ತು. ಪ್ರವಾಸಿಗರು ಈ ಸೆಲ್ಫಿ ಸ್ಟ್ಯಾಂಡ್‌ನಲ್ಲಿ ನಿಂತು ಫೊಟೋ ಕ್ಲಿಕ್ಕಿಸಿಕೊಂಡರು.

ಬಂದರಿಗೆ ಆಗಮಿಸಿದ ಬಳಿಕ ಪ್ರವಾಸಿಗರು ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಕಾರ್ಕಳದ ಗೊಮ್ಮಟೇಶ್ವರ ಪ್ರತಿಮೆ, ಪಿಲಿಕುಳ ನಿಸರ್ಗಧಾಮ, ಮೂಡಬಿದ್ರಿಯ ಸಾವಿರ ಕಂಬದ ಬಸದಿ, ಗೋಕರ್ಣನಾಥೇಶ್ವರ ದೇವಸ್ಥಾನ, ಸೇಂಟ್ ಅಲೋಶಿಯಸ್ ಚರ್ಚ್ ಸೇರಿದಂತೆ ಸ್ಥಳೀಯ ಮಾರುಕಟ್ಟೆ ಪ್ರದೇಶಗಳನ್ನು ವೀಕ್ಷಿಸಿದರು.

ಸಂಜೆ 4.30ರ ವೇಳೆಗೆ ಕ್ರೂಸ್ ಮಂಗಳೂರಿನಿಂದ ಕೊಚ್ಚಿ ಕಡೆಗೆ ತನ್ನ ಮುಂದಿನ ಪ್ರಯಾಣ ಮುಂದುವರಿಸಿತು.

ಅಧಿಕಾರಿಗಳ ಮಾಹಿತಿ ಪ್ರಕಾರ, 2025–26ರ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ನ್ಯೂ ಮಂಗಳೂರು ಬಂದರಿಗೆ ಐದು ವಿದೇಶಿ ಕ್ರೂಸ್‌ಗಳು ಆಗಮಿಸುವ ಸಾಧ್ಯತೆ ಇದ್ದು, ಅವುಗಳಲ್ಲಿ ಹೆಚ್ಚಿನವು ಯುರೋಪ್ ದೇಶಗಳಿಂದ ಆಗಮಿಸಲಿವೆ. ಇದರಿಂದ ಮಂಗಳೂರು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.