ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್-1 ಪಿಕ್-ಅಪ್ ವಲಯದಲ್ಲಿ ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರಿಗೆ ನೀಡಲಾಗುತ್ತಿದ್ದ ಉಚಿತ ಪಾರ್ಕಿಂಗ್ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ತಿಳಿಸಿದೆ. ಈ ಕ್ರಮದಿಂದ ಚಾಲಕರು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈವರೆಗೆ 10 ನಿಮಿಷಗಳವರೆಗೆ ಮಾತ್ರ ಉಚಿತ ಪಾರ್ಕಿಂಗ್ ಅವಕಾಶವಿದ್ದರೆ, ಇದೀಗ ಅದನ್ನು 15 ನಿಮಿಷಗಳಿಗೆ ವಿಸ್ತರಿಸಲಾಗಿದೆ. 15 ನಿಮಿಷಗಳ ಒಳಗೆ ವಾಹನ ಹೊರಬಂದರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. 15 ರಿಂದ 45 ನಿಮಿಷಗಳವರೆಗೆ ಪಾರ್ಕಿಂಗ್ ಮಾಡಿದರೆ ₹100 ಶುಲ್ಕ ವಸೂಲಿ ಮಾಡಲಾಗುತ್ತದೆ. ನಂತರ ಪ್ರತಿ ಗಂಟೆಗೆ 50 ರು. ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Bangalore International Airport Taxi

ವಿಮಾನ ನಿಲ್ದಾಣದ ಪಿಕ್-ಅಪ್ ವಲಯದಲ್ಲಿ ಉಂಟಾಗುವ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಹಾಗೂ ಕರ್ಬ್‌ಸೈಡ್ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು BIAL ಅಧಿಕಾರಿಗಳು ತಿಳಿಸಿದ್ದಾರೆ. ಈ ಬದಲಾವಣೆ ವಿಶೇಷವಾಗಿ ಟ್ಯಾಕ್ಸಿ ಚಾಲಕರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸುವುದರ ಜತೆಗೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಟರ್ಮಿನಲ್-1ಗೆ ಪ್ರಯಾಣಿಕರನ್ನು ತಲುಪಿಸಲು ಶಟಲ್ ಬಸ್, ಬಗ್ಗಿ ಹಾಗೂ ಕಾರು ಸೇವೆಗಳು ಮುಂದುವರಿಯಲಿದ್ದು, ಪಿಕ್-ಅಪ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲಾಗುವುದು ಎಂದು ವಿಮಾನ ನಿಲ್ದಾಣ ಆಡಳಿತ ತಿಳಿಸಿದೆ.