ಗದಗದಲ್ಲಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಇಲ್ಲಿನ ಗದಗ ಮೃಗಾಲಯವನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿದ್ದು, ಅದರಂತೆ ಗದಗ ಮೃಗಾಲಯವು ಹುಬ್ಬಳ್ಳಿ- ಹೊಸಪೇಟೆ ಹೆದ್ದಾರಿವರೆಗೆ ವಿಸ್ತರಣೆಗೊಳ್ಳಲಿದೆ.

h k patil

ಪ್ರಸ್ತುತ 40.02 ಎಕರೆಯಲ್ಲಿರುವ ಮೃಗಾಲಯವು ಹೊಸ ಸೌಲಭ್ಯಗಳ ಜತೆಗೆ 13.20 ಎಕರೆಯಷ್ಟು ವಿಸ್ತಾರಗೊಳ್ಳಲಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಆಕರ್ಷಕ ಪ್ರವೇಶದ್ವಾರ ನಿರ್ಮಾಣ ಈ ಯೋಜನೆಯ ಪ್ರಮುಖ ಭಾಗವಾಗಿದೆ. ಜತೆಗೆ ಆ್ಯಂಪಿಥಿಯೇಟ‌ರ್ ನಿರ್ಮಾಣ. ಕ್ಲಾಕ್‌ರೂಮ್ ಸೌಲಭ್ಯ, ಫುಡ್‌ಕೋರ್ಟ್ ರೆಸ್ಟೋರೆಂಟ್ ಸ್ಥಾಪನೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆ, ವಿಶಾಲವಾದ ಪಾರ್ಕಿಂಗ್ ಏರಿಯಾ ಸೇರಿದಂತೆ ಪ್ರವಾಸಿಗರಿಗೆ ಅತ್ಯಾಧುನಿಕ ಹಾಗೂ ಆರಾಮದಾಯಕ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ. ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್‌ ಈ ಕುರಿತು ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದರು. ಗದಗದ ಬಿಂಕದಕಟ್ಟಿಯಲ್ಲಿರುವ ಫಾರೆಸ್ಟ್​ ಗೆಸ್ಟ್​ಹೌಸ್​ನಲ್ಲಿ ನಡೆದ ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಅಲ್ಲದೆ ಮೃಗಾಲಯ ಅಭಿವೃದ್ಧಿ, ವಿಸ್ತರಣೆ ಕುರಿತಂತೆ ವರದಿ ಪರಿಶೀಲಿಸಿ ಹಲವು ಸಲಹೆ ಸೂಚನೆಗಳನ್ನು ನೀಡಲಾಯಿತು.