ದೆಹಲಿ-ಜೈಪುರ ಪ್ರಯಾಣಿಕರಿಗೆ ಸಿಹಿಸುದ್ದಿ
ಆಗಸ್ಟ್ 1ರಿಂದ ಟೋಲ್ ಪ್ಲಾಜಾದಲ್ಲಿ ವಾಹನ ನಿಲ್ಲಿಸುವ ಅಗತ್ಯವಿಲ್ಲ
ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-48)ಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಆಗಸ್ಟ್ 1ರಿಂದ ಮಹತ್ವದ ಬದಲಾವಣೆ ಜಾರಿಯಾಗಿದೆ. ರಾಜಸ್ಥಾನದ ಶಾಹಜಹಾನ್‌ಪುರ ಟೋಲ್ ಪ್ಲಾಜಾದಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಆರಂಭವಾಗುತ್ತಿರುವುದರಿಂದ ವಾಹನಗಳು ಟೋಲ್ ಗೇಟ್‌ನಲ್ಲಿ ನಿಲ್ಲಿಸದೇ ನೇರವಾಗಿ ಸಂಚರಿಸಬಹುದು. ಇದರಿಂದ ಗುರುಗ್ರಾಮ– ಜೈಪುರ ನಡುವಿನ ಸುಮಾರು 270 ಕಿಮೀ. ಹೆದ್ದಾರಿ ಸಂಪೂರ್ಣವಾಗಿ ತಡೆರಹಿತ ಟೋಲ್ ವ್ಯವಸ್ಥೆಯ ವ್ಯಾಪ್ತಿಗೆ ಬರುತ್ತದೆ.

ಈಗಾಗಲೇ ದೌಲತ್‌ಪುರ ಹಾಗೂ ಮನೋಹರ್‌ಪುರ ಟೋಲ್ ಪ್ಲಾಜಾಗಳಲ್ಲಿ ಇದೇ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಶಾಹಜಹಾನ್‌ಪುರದಲ್ಲೂ ಜಾರಿಗೆ ಬಂದಿರುವುದರಿಂದ ಪ್ರಯಾಣ ಇನ್ನಷ್ಟು ವೇಗವಾಗಿ ಮತ್ತು ಸುಗಮವಾಗಲಿದೆ. ಈ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಬ್ಯಾರಿಕೇಡ್‌ಗಳ ಬದಲು ಕ್ಯಾಮೆರಾಗಳು ಮತ್ತು ಸಂವೇದಕಗಳ ಮೂಲಕ ವಾಹನಗಳನ್ನು ಗುರುತಿಸಲಾಗುತ್ತದೆ.
ವಾಹನದಲ್ಲಿರುವ RFID ಆಧಾರಿತ FASTag ಹಾಗೂ ANPR (Automatic Number Plate Recognition) ಕ್ಯಾಮೆರಾಗಳ ಸಹಾಯದಿಂದ ವಾಹನದ ಸಂಖ್ಯೆ ಮತ್ತು ಟೋಲ್ ವಿವರಗಳನ್ನು ದಾಖಲಿಸಿ, ಶುಲ್ಕವನ್ನು ಸ್ವಯಂಚಾಲಿತವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.
ಹೊಸ ವ್ಯವಸ್ಥೆಯಿಂದ ಟೋಲ್ ಪ್ಲಾಜಾಗಳಲ್ಲಿ ಉಂಟಾಗುತ್ತಿದ್ದ ಉದ್ದ ಸಾಲುಗಳು, ಕಾಯುವ ಸಮಯ ಹಾಗೂ ಇಂಧನ ವ್ಯರ್ಥವಾಗುವುದನ್ನು ಕಡಿಮೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನಗಳು ನಿಲ್ಲಿಸದೇ ಸಾಗುವುದರಿಂದ ಪ್ರಯಾಣದ ಸಮಯವೂ ಕಡಿಮೆಯಾಗಲಿದ್ದು, ಹೆದ್ದಾರಿಯ ಸಂಚಾರ ದಟ್ಟಣೆ ಇಳಿಯುವ ನಿರೀಕ್ಷೆಯಿದೆ. ಈ ಯೋಜನೆಯನ್ನು ದೇಶದ ಇತರ ಪ್ರಮುಖ ಹೆದ್ದಾರಿಗಳಲ್ಲೂ ಹಂತ ಹಂತವಾಗಿ ವಿಸ್ತರಿಸುವ ಉದ್ದೇಶ ಸರಕಾರಕ್ಕಿದೆ.