ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳು ಎಚ್-1ಬಿ ವೀಸಾ ನವೀಕರಣಕ್ಕೆ ಸಂಬಂಧಿಸಿದ ಸಂದರ್ಶನಗಳನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ ಮುಂದಿನ ವರ್ಷಕ್ಕೆ ಮುಂದೂಡಿರುವುದರಿಂದ, ನೂರಾರು ಭಾರತೀಯ ಎಚ್-1ಬಿ ವೀಸಾದಾರರು ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲಸದ ಪರವಾನಗಿ (ವರ್ಕ್ ಪರ್ಮಿಟ್) ನವೀಕರಣಕ್ಕಾಗಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ್ದ ಅನೇಕರು ಇದೀಗ ವೀಸಾ ಸಿಗದೆ ಭಾರತದಲ್ಲೇ ಸಿಲುಕಿಕೊಂಡಿದ್ದಾರೆ.

ಅಮೆರಿಕ ಸರಕಾರ ಜಾರಿಗೆ ತಂದಿರುವ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನಾ ನೀತಿ ಈ ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ನೀತಿಯ ಪರಿಣಾಮವಾಗಿ ವೀಸಾ ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ತೀವ್ರಗೊಂಡಿದ್ದು, ಸಂದರ್ಶನ ವೇಳಾಪಟ್ಟಿಗಳನ್ನು ಏಕಾಏಕಿ ಮುಂದೂಡಲಾಗಿದೆ ಎಂದು ವಲಸೆ ತಜ್ಞರು ತಿಳಿಸಿದ್ದಾರೆ.

H-1B Renewal Crisis_ Indians Unable to Return to US After Interview Delay

ಈ ಬೆಳವಣಿಗೆಯಿಂದಾಗಿ ಅಮೆರಿಕದ ಐಟಿ, ಆರೋಗ್ಯ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ವೃತ್ತಿಪರರು ತೀವ್ರ ಅನಿಶ್ಚಿತತೆಗೆ ಒಳಗಾಗಿದ್ದಾರೆ. ವೀಸಾ ನವೀಕರಣವಾಗದೇ ಇದ್ದರೂ ಕೆಲಸಕ್ಕೆ ಹಾಜರಾಗುವಂತೆ ಕೆಲ ಕಂಪನಿಗಳು ಒತ್ತಡ ಹೇರುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂದು ವೀಸಾದಾರರು ಆರೋಪಿಸಿದ್ದಾರೆ.

ವೀಸಾ ವಿಳಂಬದಿಂದ ಉದ್ಯೋಗ ಭದ್ರತೆ, ವೇತನ, ವಸತಿ, ಮಕ್ಕಳ ಶಿಕ್ಷಣ ಹಾಗೂ ಕುಟುಂಬ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೆಲವರು ತಿಂಗಳುಗಳ ಕಾಲ ಭಾರತದಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವೃತ್ತಿಜೀವನವೇ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.