ಸರ್ಕಾರದ ಅನುಮತಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಅಡ್ವೆಂಚರ್‌ ಟೂರಿಸಂ ಘಟಕಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕೇರಳ ರಾಜ್ಯದ ಇಡುಕ್ಕಿ ಜಿಲ್ಲಾಡಳಿತ ತಿಳಿಸಿದೆ. ಇತ್ತೀಚೆಗೆ ಸ್ಕೈ-ಡೈನಿಂಗ್ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಅಪಾಯಕರ ಘಟನೆ ಹಿನ್ನೆಲೆಯಲ್ಲಿ, ಸುರಕ್ಷತಾ ನಿಯಮ ಉಲ್ಲಂಘನೆ ಮಾಡುತ್ತಿರುವ ಎಲ್ಲಾ ಘಟಕಗಳನ್ನು ಗುರುತಿಸಿ ನಿಷೇಧಿಸುವ ಕಾರ್ಯ ಆರಂಭಿಸಲಾಗಿದೆ.

ಕೆಲವು ದಿನಗಳ ಹಿಂದೆ ಇಡುಕ್ಕಿ ಜಿಲ್ಲೆಯ ಅನಾಚಲ್‌ ಪ್ರದೇಶದ ಸ್ಕೈ-ಡೈನಿಂಗ್‌ ರೆಸ್ಟೋರೆಂಟ್‌ನಲ್ಲಿ ನಾಲ್ಕು ಜನರ ಕುಟುಂಬವೊಂದು ತಾಂತ್ರಿಕ ದೋಷದಿಂದ 150 ಅಡಿ ಎತ್ತರದ ಡೆಕ್‌ನಲ್ಲಿಯೇ ಹಲವು ಗಂಟೆಗಳ ಕಾಲ ಸಿಲುಕಿಕೊಂಡಿತ್ತು. ನಂತರ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿಯ ಸಹಾಯದಿಂದ ಅವರನ್ನು ರಕ್ಷಿಸಲಾಗಿತ್ತು. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ ತನಿಖೆಗೆ ಆದೇಶಿಸಿತ್ತು. ತನಿಖೆಯ ನಂತರ, ಸಂಸ್ಥೆ ಯಾವುದೇ ರೀತಿಯ ಲೈಸೆನ್ಸ್‌ ಪಡೆಯದೆ ಕಾರ್ಯ ನಡೆಸುತ್ತಿದ್ದದ್ದು ಪತ್ತೆಯಾಗಿದೆ. ಸ್ಥಳೀಯ ಸಂಸ್ಥೆ, ಅಗ್ನಿಶಾಮಕ ದಳ, ವಿದ್ಯುತ್‌ ಹಾಗೂ ರೆವೆನ್ಯೂ ಇಲಾಖೆಯಿಂದ ಅಗತ್ಯ ಅನುಮತಿಗಳನ್ನು ಪಡೆಯದೇ ಸ್ಕೈ-ಡೈನಿಂಗ್ ಚಟುವಟಿಕೆಯನ್ನು ನಡೆಸಲಾಗುತ್ತಿತ್ತೆಂದು ವರದಿಗಳು ತಿಳಿಸಿವೆ. ಇದರ ಹಿನ್ನೆಲೆಯಲ್ಲಿ, ಸಂಸ್ಥೆಯ ವಿರುದ್ಧ ಸ್ಟಾಪ್ ಮೆಮೊ ಜಾರಿ ಮಾಡಲಾಗಿದೆ.

Sky dining restaurant


ಅಲ್ಲದೆ, ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ, ಸಂಬಂಧಿತ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ. ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ಸಾರ್ವಜನಿಕರ ಜೀವಕ್ಕೆ ಅಪಾಯ ತಂದ ಕಾರಣ, ಭಾರತೀಯ ದಂಡ ಸಂಹಿತೆ ಮತ್ತು ರಾಜ್ಯ ಪೊಲೀಸ್ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ದಿನೇಶನ್ ಚೇರುವತ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಜಿಲ್ಲೆಯಾದ್ಯಂತ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಅಡ್ವೆಂಚರ್‌ ಟೂರಿಸಂ ಘಟಕಗಳ ಸಂಪೂರ್ಣ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಘಟಕವು ಅನುಮೋದನೆ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದಿಲ್ಲ” ಎಂದು ತಿಳಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ, ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲೂ ಸಮಗ್ರ ಪರಿಶೀಲನೆ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.