ಪ್ರವಾಸಿಗರು ಹೆಚ್ಚಾದರೆ ಹುಲಿಗಳ ಸಂತಾನೋತ್ಪತ್ತಿ ಕಷ್ಟವೇ..!
ಸಿಸಿಎಂಬಿ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮದ ಒತ್ತಡವು ಹುಲಿಗಳ ಸಂತಾನೋತ್ಪತ್ತಿ ಮಾದರಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ವಿಜ್ಞಾನಿಗಳು ತೆಲಂಗಾಣ ಮತ್ತು ಇತರ ರಾಜ್ಯಗಳ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಯು ಪ್ರವಾಸೋದ್ಯಮದ ನಕಾರಾತ್ಮಕ ಮಜಲುಗಳನ್ನು ಅನಾವರಣಗೊಳಿಸಿದೆ.
ಇದನ್ನೂ ಓದಿ: ಮಧುಮಲೈ ಕಾಡಿನಲ್ಲಿ ಹುಲಿ ಸಫಾರಿಯ ಕಥೆ
ಪ್ರವಾಸಿ ವಾಹನಗಳ ನಿರಂತರ ಓಡಾಟ ಮತ್ತು ಮಾನವ ಹಸ್ತಕ್ಷೇಪದಿಂದಾಗಿ ಹುಲಿಗಳಲ್ಲಿ 'ಗ್ಲುಕೋಕಾರ್ಟಿಕಾಯ್ಡ್' ಎಂಬ ಒತ್ತಡದ ಹಾರ್ಮೋನ್ ಮಟ್ಟವು ಗಮನಾರ್ಹವಾಗಿ ಏರಿಕೆಯಾಗಿದೆ. ಸಂತಾನೋತ್ಪತ್ತಿ ಸಾಮರ್ಥ್ಯ ಕುಂಠಿತ: ಅತಿಯಾದ ಮಾನಸಿಕ ಒತ್ತಡವು ಹುಲಿಗಳ ಹಾರ್ಮೋನ್ ಸಮತೋಲನವನ್ನು ಕದಡುತ್ತಿದೆ. ಇದು ಅವುಗಳ ಸಂತಾನೋತ್ಪತ್ತಿ ಚಕ್ರದಲ್ಲಿ ವ್ಯತ್ಯಯ ಉಂಟುಮಾಡುತ್ತಿದ್ದು, ಗರ್ಭಧರಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ಪ್ರವಾಸಿಗರ ಗದ್ದಲದಿಂದಾಗಿ ಹುಲಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನಗಳನ್ನು ಬಿಟ್ಟು ಬೇರೆಡೆಗೆ ವಲಸೆ ಹೋಗುತ್ತಿವೆ ಅಥವಾ ರಾತ್ರಿ ವೇಳೆಯಲ್ಲಿ ಮಾತ್ರ ಸಂಚರಿಸುವ ಅಭ್ಯಾಸ ಮಾಡಿಕೊಳ್ಳುತ್ತಿವೆ. ಇದು ಅವುಗಳ ಬೇಟೆಯಾಡುವ ಮತ್ತು ವಿಶ್ರಾಂತಿ ಪಡೆಯುವ ಕ್ರಮದ ಮೇಲೂ ಪರಿಣಾಮ ಬೀರಿದೆ.
ಈ ಅಧ್ಯಯನವು ವಿಶೇಷವಾಗಿ ತೆಲಂಗಾಣದ ಅಮ್ರಬಾದ್ ಟೈಗರ್ ರಿಸರ್ವ್ಸ್ ಮತ್ತು ಕವಲ್ ಟೈಗರ್ ರಿಸರ್ವ್ ವ್ಯಾಪ್ತಿಯಲ್ಲಿ ನಡೆಸಲಾದ ಅವಲೋಕನಗಳನ್ನು ಒಳಗೊಂಡಿದೆ. ಇಲ್ಲಿನ ಪ್ರವಾಸೋದ್ಯಮ ವಲಯಗಳಲ್ಲಿನ ಹುಲಿಗಳ ಮಲದ ಮಾದರಿಗಳನ್ನು ಪರೀಕ್ಷಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
ವನ್ಯಜೀವಿಗಳ ಮೇಲೆ ಕನಿಷ್ಠ ಪರಿಣಾಮ ಬೀರುವಂತೆ ಪ್ರವಾಸೋದ್ಯಮವನ್ನು ನಿಯಂತ್ರಿಸಬೇಕೆಂದು ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ. ಪ್ರವಾಸಿ ವಾಹನಗಳ ಸಂಖ್ಯೆಯನ್ನು ಸೀಮಿತಗೊಳಿಸುವುದು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವೇಶವನ್ನು ನಿರ್ಬಂಧಿಸುವುದು ಅನಿವಾರ್ಯವಾಗಿದೆ.