ಒಡಿಶಾದ ಪುರಿಯಲ್ಲಿ ನಡೆಯುವ ಜಗನ್ನಾಥ ರಥಯಾತ್ರೆ ದೇಶದ ಅತ್ಯಂತ ಭವ್ಯ ಮತ್ತು ಪವಿತ್ರ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಈ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಪುರಿಗೆ ಆಗಮಿಸುತ್ತಾರೆ. 2026ರ ಜಗನ್ನಾಥ ರಥಯಾತ್ರೆ ಜುಲೈ 16ರಿಂದ ಜುಲೈ 24ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಪುರಿ ನಗರವು ಭಕ್ತಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಗಮವಾಗಿರಲಿದೆ.

ಹಿಂದೂ ಧರ್ಮದಲ್ಲಿ ಜಗನ್ನಾಥ ರಥಯಾತ್ರೆಗೆ ಅಪಾರ ಮಹತ್ವವಿದೆ. ಆಷಾಢ ಮಾಸದ ಶುಕ್ಲಪಕ್ಷದ ದ್ವಿತೀಯದಂದು ಈ ಉತ್ಸವ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯರಿಗಾಗಿ ಮೂರು ಭವ್ಯ ಮರದ ರಥಗಳನ್ನು ನಿರ್ಮಿಸಲಾಗುತ್ತದೆ.

Untitled design (69)

ಮೊದಲು ಬಲಭದ್ರನ ರಥ, ನಂತರ ಸುಭದ್ರೆಯ ರಥ ಮತ್ತು ಕೊನೆಯಲ್ಲಿ ಜಗನ್ನಾಥನ ನಂದಿಘೋಷ ರಥ ಸಾಗುತ್ತದೆ. ಈ ಯಾತ್ರೆಯ ವಿಶೇಷತೆ ಎಂದರೆ ದೇವರು ದೇವಾಲಯದ ಹೊರಗೆ ಬಂದು ಎಲ್ಲರಿಗೂ ದರ್ಶನ ನೀಡುತ್ತಾರೆ. ರಥದ ಹಗ್ಗವನ್ನು ಎಳೆಯುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಒಂಬತ್ತು ದಿನಗಳ ಕಾಲ ದೇವರುಗಳು ಗುಂಡಿಚಾ ದೇವಾಲಯದಲ್ಲಿ ವಾಸ್ತವ್ಯ ಹೂಡಿ ಬಳಿಕ ಬಹುಡಾ ಯಾತ್ರೆ ಮೂಲಕ ಮರಳಿ ಜಗನ್ನಾಥ ದೇವಾಲಯಕ್ಕೆ ಆಗಮಿಸುತ್ತಾರೆ.