ಜಮ್ಮು– ಕಾಶ್ಮೀರದ ಶ್ರೀನಗರದಲ್ಲಿರುವ ಶೇಖ್ ಉಲ್ ಆಲಂ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಕೇಂದ್ರದಲ್ಲಿ ಅಡ್ವೆಂಚರ್‌ ಟೂರಿಸಂ ಅನ್ನು ಉತ್ತೇಜಿಸುವ ಉದ್ದೇಶದಿಂದ 17ನೇ ಅಡ್ವೆಂಚರ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ATOAI) ಕನ್ವೆನ್ಷನ್ ಜರುಗಿತು.

ನಾಲ್ಕು ದಿನಗಳ ಈ ಕನ್ವೆನ್ಷನ್‌ನಲ್ಲಿ ಸುರಕ್ಷಿತ ಹಾಗೂ ಜವಾಬ್ದಾರಿಯುತ ಸಾಹಸ ಪ್ರವಾಸೋದ್ಯಮ ಎಂಬ ವಿಷಯದ ಕುರಿತು ಚರ್ಚಿಸಲಾಯಿತು. ಜಮ್ಮು– ಕಾಶ್ಮೀರದಲ್ಲಿ ನಡೆಸಬಹುದಾದ ಟ್ರೆಕ್ಕಿಂಗ್, ಸ್ಕೀಯಿಂಗ್, ರಿವರ್ ರಾಫ್ಟಿಂಗ್, ಪರಾಗ್ಲೈಡಿಂಗ್ ಸೇರಿದಂತೆ ಹಲವು ಅಡ್ವೆಂಚರ್‌ ಚಟುವಟಿಕೆಗಳ ಕುರಿತು ತಜ್ಞರು ಚರ್ಚಿಸಿದರು.

Jammu & Kashmir Hosts 17th ATOAI Convention on Adventure Tourism

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಮ್ಮು– ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಪ್ರವಾಸೋದ್ಯಮದಲ್ಲಿ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ತಂತ್ರಜ್ಞಾನ ಬಳಕೆ ಅತ್ಯಂತ ಅಗತ್ಯವೆಂದು ಹೇಳಿದರು. ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆಯಿಂದಲೇ ಪ್ರವಾಸೋದ್ಯಮದ ಸತತ ಅಭಿವೃದ್ಧಿ ಸಾಧ್ಯವಿದೆ ಎಂದು ತಿಳಿಸಿದರು.

ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಕನ್ವೆನ್ಷನ್‌ನಲ್ಲಿ, ಕಾಶ್ಮೀರದ ಅಪರೂಪದ ಹಂಗೂಲ್ (ರೆಡ್ ಡೀರ್) ಆಧಾರಿತ ‘ಹಾಂಗ್ಲು’ ಎಂಬ ಅಧಿಕೃತ ಲೋಗೋವನ್ನು ಪರಿಚಯಿಸಲಾಯಿತು.

ಈ ಕನ್ವೆನ್ಷನ್‌ನಲ್ಲಿ ವಿವಿಧ ಪ್ಯಾನಲ್ ಚರ್ಚೆಗಳು, ಕಾರ್ಯಾಗಾರಗಳು ಹಾಗೂ ಪ್ರಶಸ್ತಿ ಸಮಾರಂಭಗಳು ಕೂಡ ನಡೆದವು. ಪ್ರವಾಸೋದ್ಯಮ ತಜ್ಞರು ಮತ್ತು ಉದ್ಯಮ ಪ್ರತಿನಿಧಿಗಳು ಈ ಕನ್ವೆನ್ಷನ್‌ನಲ್ಲಿ ಭಾಗವಹಿಸಿದ್ದರು.