ಕಳೆದ ಎರಡು ವರ್ಷಗಳಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ವಿದೇಶಿ ಪ್ರವಾಸಿಗರ ಆಗಮನದಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. 2021-22ರಲ್ಲಿ, ಸುಮಾರು 19,000 ವಿದೇಶಿಯರು ಕಾಶ್ಮೀರಕ್ಕೆ ಭೇಟಿ ನೀಡಿದ್ದು, 2022-23ರಲ್ಲಿ, ಕಾಶ್ಮೀರವು 30,000 ವಿದೇಶಿ ಪ್ರವಾಸಿಗರ ಆಗಮನವನ್ನು ದಾಖಲಿಸಿದರೆ, ಜಮ್ಮುವಿಗೆ 17,000 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.

jammu and kashmir

ಜಮ್ಮು ವಿಭಾಗದ ಸುಚೇತ್‌ಗಢ, ಐಥೆಮ್, ಬಸೋಹ್ಲಿ, ಪಂಚೇರಿ, ನಾಥಟೋಪ್, ಗುಲಾಬ್‌ಗಢ ಮತ್ತು ರಾನ್ಸೂ ಮತ್ತು ಕಾಶ್ಮೀರ ವಿಭಾಗದ ಗುರೆಜ್, ಬಂಗುಸ್ ಮತ್ತು ದೂಧ್‌ಪತ್ರಿ ಸೇರಿದಂತೆ ಜಮ್ಮು-ಕಾಶ್ಮೀರದ ಅನೇಕ ಪ್ರೇಕ್ಷಣೀಯ ತಾಣಗಳು ಪ್ರವಾಸಿ ನಕ್ಷೆಯಲ್ಲಿ ಪ್ರಾಮುಖ್ಯ ಪಡೆದಿವೆ. ಇವೆಲ್ಲದಕ್ಕೂ ಪ್ರವಾಸೋದ್ಯಮ ಇಲಾಖೆ ನಡೆಸಿದ ಪ್ರಚಾರ ಕಾರ್ಯಕ್ರಮಗಳೇ ಕಾರಣ ಎಂದು ಒಮರ್‌ ಹೇಳಿದರು.

ಅಲ್ಲದೆ, ಪ್ರವಾಸೋದ್ಯಮ ಸಚಿವಾಲಯವು ಕಳೆದ ಎರಡು ವರ್ಷಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಜಾಹೀರಾತಿಗಾಗಿ 50.5 ಕೋಟಿ ರು.ಗಳನ್ನು ಹಂಚಿಕೆ ಮಾಡಿದ್ದು, ಅದರಲ್ಲಿ 42 ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಬಳಸಲಾಗಿದೆ ಎಂದು ಮಾಹಿತಿ ನೀಡಿದರು. ಗುಲ್ಮಾರ್ಗ್ ಮಾದರಿಯಲ್ಲಿ ಸೋನಾಮಾರ್ಗ್‌ನಲ್ಲಿ ಚಳಿಗಾಲದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಲಾಖೆಯು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿರುವುದಾಗಿ ಅವರು ಹೇಳಿದರು.