ಮಂಗಳೂರಿನಲ್ಲಿ ಜನಪ್ರಿಯ ಕರಾವಳಿ ಉತ್ಸವವು ಡಿಸೆಂಬರ್‌ 20ರಂದು ಆರಂಭವಾಗಿ ಜನವರಿ 4ರವರೆಗೆ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಈ ಉತ್ಸವವು ಸಾಂಸ್ಕೃತಿಕ, ಕ್ರೀಡಾ ಮತ್ತು ಮನೋರಂಜನಾ ಕಾರ್ಯಕ್ರಮಗಳ ಮೂಲಕ ನೋಡುಗರ ಕಣ್ಮನ ಸೆಳೆಯಲು ಸಿದ್ಧವಾಗಿದೆ.

ಡಿಸೆಂಬರ್‌ 20ರಂದು ʼಕರಾವಳಿ ಉತ್ಸವ ಮೈದಾನʼದಲ್ಲಿ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ಸವದ ಅವಧಿಯಾದ್ಯಂತ ಕರಾವಳಿ ಉತ್ಸವ ಮೈದಾನದಲ್ಲಿ ನಾನಾ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್ ಸಾರ್ವಜನಿಕರಿಗಾಗಿ ಲಭ್ಯವಿರಲಿದೆ. ಪ್ರತೀ ಶನಿವಾರ ಮತ್ತು ಭಾನುವಾರ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

Karavali utsav Mangalore


ಸಂಗೀತ ಸಂಭ್ರಮ

ಜನವರಿ 3 ಮತ್ತು 4ರಂದು ಪಣಂಬೂರು, ತಣ್ಣೀರುಬಾವಿ ಮತ್ತು ಸಸಿ ಹಿತ್ಲುಕಡಲ ತೀರಗಳಲ್ಲಿ ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ಕಲಾವಿದರಿಂದ ʼಮ್ಯೂಸಿಕಲ್‌ ನೈಟ್‌ʼ ಕಾರ್ಯಕ್ರಮ ನಡೆಯಲಿದೆ. ಉತ್ಸವದ ಮುಂದುವರಿದ ಭಾಗವಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ ಎಂದರು.

ಬೀಚ್‌ ಉತ್ಸವ
ಡಿಸೆಂಬರ್‌ 20ರಿಂದ ಪ್ರತೀ ಶನಿವಾರ ಮತ್ತು ಭಾನುವಾರ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಹೆಲಿ ರೈಡ್‌, ಜನವರಿ 9ರಿಂದ 11ರ ತನಕ ಕದ್ರಿ ಪಾರ್ಕ್ ರಸ್ತೆಯಲ್ಲಿ ಚಿತ್ರ ಶಿಲ್ಪ ನೃತ್ಯ ಮೇಳ- ಕಲಾ ಪರ್ಬ, ಜನವರಿ 26ರಂದು ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ತಣ್ಣೀರುಬಾವಿ ಬೀಚ್‌ನಲ್ಲಿ 9ರಿಂದ 11ರ ತನಕ ಟ್ರಯಾತ್ಲಾನ್‌, 17 ಮತ್ತು18ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ, 23ರಿಂದ 25ರ ತನಕ ಪ್ರಮುಖ ಬೀಚ್‌ಗಳಲ್ಲಿ ಬೀಚ್‌ ಉತ್ಸವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.