ಸೈಕಲ್‌ ಏರಿ ಸವಾರಿ ಮಾಡುವ ಮಜವಾದ ಕಾಲ ಈಗಿಲ್ಲ. ಈಗೇನಿದ್ದರೂ ಫಿಟ್‌ನೆಟ್‌ ಕ್ರೇಜ್‌ ಉಳ್ಳವರು ಮಾತ್ರ ಸೈಕಲ್‌ ಪ್ರೀತಿ ಇಟ್ಟುಕೊಂಡಿರುತ್ತಾರೆ ಎನ್ನುವವರೇ ಹೆಚ್ಚಿನ ಮಂದಿ. ಇದನ್ನು ಸುಳ್ಳು ಎನ್ನುವಂತೆಯೂ ಇಲ್ಲ. ಯಾಕೆಂದರೆ ಇಂದು ಸೈಕಲ್‌ ಪ್ರೀತಿ, ಅರೋಗ್ಯ ಕಾಳಜಿಯೊಂದಿಗೆ ಬೆರೆತುಕೊಂಡಿದೆ. ವ್ಯಾಯಾಮದ ಮೂಲಕ ದೇಹವನ್ನು ಚುರುಕಾಗಿಸುವ ವಿಧಾನಗಳಲ್ಲಿ ಸೈಕ್ಲಿಂಗ್‌, ಅಥವಾ ಪೆಡಲಿಂಗ್‌ ಸಹ ಪ್ರಮುಖವಾಗಿದೆ. ಆದರೆ ಅಂಥ ಸೈಕಲ್‌ ಏರಿ ಸತತ 60 ಗಂಟೆಗೂ ಹೆಚ್ಚು ಕಾಲ ಸುತ್ತಾಡಿ ಬಂದಿರುವುದೆಂದರೆ ಅದು ಸುಲಭದ ಮಾತಲ್ಲ. ಅಂಥ ವಿಶೇಷ ಪ್ರಯಾಣ ಕೈಗೊಂಡವರು ರಾಯಲ್ ರೈಡರ್ಸ್ ಮೈಸೂರು ತಂಡ.

ಬೆಂಗಳೂರು ಮೈಸೂರು ಮೂಲದವರಾಗಿರುವ ಈ ತಂಡದಲ್ಲಿರುವ ಸದಸ್ಯರೆಲ್ಲರೂ ಅಮೆಚೂರ್‌ ಸೈಕ್ಲಿಸ್ಟ್‌. ಹವ್ಯಾಸಕ್ಕಾಗಿ ಸೈಕಲ್‌ ಸವಾರಿಯನ್ನು ಪ್ರಾರಂಭಿಸಿದ್ದ ಈ ತಂಡದ ಪ್ರತಿಯೊಬ್ಬ ಸದಸ್ಯನೂ ನಂತರದ ದಿನಗಳಲ್ಲಿ ಸೈಕ್ಲಿಂಗ್‌ನ್ನು ಸೀರಿಯಸ್‌ ಆಗಿ ತೆಗೆದುಕೊಂಡು ದಾಖಲೆಯನ್ನು ಸೃಷ್ಟಿಸುವ ಕನಸು ಕಂಡವರು. ಈ ಪ್ರಯತ್ನದ ಫಲವಾಗಿ ಹುಟ್ಟುಕೊಂಡಿರುವುದೇ ಕಾಶ್ಮೀರ್‌ ಟು ಕನ್ಯಾಕುಮಾರಿ ಸೈಕಲ್‌ ಸವಾರಿ. ಇವರು ಕಾಶ್ಮೀರದ ಶಿಖರಗಳಿಂದ ಕನ್ಯಾಕುಮಾರಿಯ ತುದಿಯವರೆಗೆ ಸುಮಾರು 22 ದಿನಗಳ ಕಾಲ, 11 ರಾಜ್ಯಗಳಲ್ಲಿ ಸೇರಿ 3700ಕ್ಕೂ ಹೆಚ್ಚು ಕಿಲೋ ಮೀಟರ್‌ ಸೈಕಲ್‌ನಲ್ಲಿ ಪ್ರಯಾಣಿಸಿದ್ದಾರೆಯೆಂದರೆ ಅಚ್ಚರಿಪಡಲೇಬೇಕು.

Untitled design (8)

ಈ ಸುಂದರ ಪ್ರಯಾಣಕ್ಕೆ ರಾಯಲ್ ರೈಡರ್ಸ್ ಮೈಸೂರು ತಂಡದ ವಿನಯ್ ಸಿಂಗ್ ನೇತೃತ್ವವಹಿಸಿದ್ದರು. ಅಲ್ಲದೆ ವೀಣಾ ಅಶೋಕ್, ಹರೀಶ್ ರಾಮನ್, ಪೂಜಾ ಹರೀಶ್, ಬೃಂದಾ ಸುಹಾಸ್ ಗೋಧಿ, ಅನಿತಾ ಬಾರ್ಗಿ, ಸಂದೀಪ್ ಸಾಗರ್, ಲಿಕ್ಮಾರಾಮ್, ಡಾ. ಸುಮನ್ ಬೈರೇಗೌಡ, ಜಿತೇಂದ್ರ ಕುಮಾರ್ ಮತ್ತು ಚಂದನಾ ಜಿತೇಂದ್ರ ಸೇರಿದ ಈ ತಂಡ ಹೊಸ ದಾಖಲೆಯನ್ನೇ ಹುಟ್ಟುಹಾಕಿದ್ದಾರೆ.

ಒಟ್ಟಿನಲ್ಲಿ ಸಾಧಿಸುವ ಛಲ, ಮನಸ್ಸು ಇದ್ದರೆ ಯಾವುದೇ ಕೆಲಸವೂ ಕಷ್ಟವೆನಿಸುವುದಿಲ್ಲ ಎಂಬುದು ಇಂಥ ತಂಡವನ್ನು ನೋಡಿಯೇ ಹೇಳಿರಬಹುದು. ಸೈಕಲ್‌ ಏರಿ ಮೈಲುಗಳ ಪ್ರಯಾಣ ಇವರಿಗೆ ಕಷ್ಟವೆನಿಸಿಲ್ಲ. ಆದರೆ ಈ ಸೈಕಲ್‌ ಸವಾರಿಯ ಮೂಲಕ ಉತ್ತಮ ಆರೋಗ್ಯದ ಸಂದೇಶವನ್ನು ಸಮಾಜಕ್ಕೆ ಸಾರುವ ಈ ತಂಡದ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.