ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ವಿಮಾನಯಾನ ಕ್ಷೇತ್ರಕ್ಕೆ ಜಾಗತಿಕ ಮಟ್ಟದ ಹೆಮ್ಮೆಯ ಗರಿ ಲಭಿಸಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಡೆಸಿರುವ ದೇಶದ ವಿಮಾನ ನಿಲ್ದಾಣಗಳ ಗ್ರಾಹಕ ತೃಪ್ತಿ ಸಮೀಕ್ಷೆಯಲ್ಲಿ, ಮಧ್ಯಪ್ರದೇಶದ ಐತಿಹಾಸಿಕ ತಾಣವಾದ ಖಜುರಾಹೊ ವಿಮಾನ ನಿಲ್ದಾಣವು ಭಾರತದಲ್ಲೇ ಅತ್ಯಂತ ಮೊದಲ ಸ್ಥಾನವನ್ನು ಪಡೆದುಕೊಂಡು 'ದೇಶದ ಅತ್ಯುತ್ತಮ ವಿಮಾನ ನಿಲ್ದಾಣ' ಎಂಬ ಗೌರವಕ್ಕೆ ಪಾತ್ರವಾಗಿದೆ.

ಇದನ್ನೂ ಓದಿ: ಜಾಗತಿಕ ವಿಮಾನ ಪ್ರಯಾಣಿಕರ ಮಾರುಕಟ್ಟೆಯಲ್ಲಿ ಭಾರತಕ್ಕೆ 6ನೆಯ ಸ್ಥಾನ

ಅಷ್ಟೇ ಅಲ್ಲದೆ, ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್‌ನ ರಾಜಾ ಭೋಜ ವಿಮಾನ ನಿಲ್ದಾಣವು ಈ ರಾಷ್ಟ್ರೀಯ ಸೂಚ್ಯಂಕದಲ್ಲಿ 3ನೆಯ ಸ್ಥಾನವನ್ನು ಮುಡಿಗೇರಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ದ್ವಿಗುಣ ಯಶಸ್ಸನ್ನು ತಂದುಕೊಟ್ಟಿದೆ.

ನಿಲ್ದಾಣದ ಒಳಾಂಗಣ ಮತ್ತು ಹೊರಾಂಗಣದ ಸ್ವಚ್ಛತೆ ಹಾಗೂ ಪರಿಸರಸ್ನೇಹಿ ಉದ್ಯಾನವನಗಳ ನಿರ್ವಹಣೆಗೆ ಪ್ರಯಾಣಿಕರು ಗರಿಷ್ಠ ಅಂಕಗಳನ್ನು ನೀಡಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಗ್ರಾಹಕ ಸೇವಾ ಪ್ರತಿನಿಧಿಗಳು ಮತ್ತು ಇಮಿಗ್ರೇಷನ್ ಅಧಿಕಾರಿಗಳ ಸ್ನೇಹಪರ ಹಾಗೂ ವಿನಮ್ರ ನಡವಳಿಕೆಯು ಜಾಗತಿಕ ಪ್ರವಾಸಿಗರ ಮನಗೆದ್ದಿದೆ. ಚೆಕ್-ಇನ್ ಫಾರ್ಮಾಲಿಟಿಗಳು, ಲಗೇಜ್ ವಿತರಣೆ ಮತ್ತು ಸುಲಭ ನ್ಯಾವಿಗೇಷನ್ ಪ್ರಕ್ರಿಯೆಗಳು ಇಲ್ಲಿ ಅತ್ಯಂತ ವೇಗವಾಗಿ ಮತ್ತು ಯಾವುದೇ ಗೊಂದಲವಿಲ್ಲದೆ ಮುಕ್ತಾಯಗೊಳ್ಳುತ್ತವೆ.

ಮಧ್ಯಪ್ರದೇಶದ ವಿಮಾನ ನಿಲ್ದಾಣಗಳ ಈ ಮಹತ್ತರ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರವಾಸೋದ್ಯಮ ಸಚಿವಾಲಯ ಮತ್ತು ವಿಮಾನ ನಿಲ್ದಾಣದ ನಿರ್ದೇಶಕರು, ʼಈ ಪ್ರಶಸ್ತಿಯು ನಮ್ಮ ಸಿಬ್ಬಂದಿಯ ನಿರಂತರ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ. ಇದು ಮಧ್ಯಪ್ರದೇಶದ ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ದೊಡ್ಡ ಬಲವನ್ನು ನೀಡಲಿದೆ,ʼ ಎಂದು ತಿಳಿಸಿದ್ದಾರೆ.