ಕೇರಳದ ಸಾಂಸ್ಕೃತಿಕ ನಗರಿ ಕೊಚ್ಚಿ, ವಿಶ್ವದ ಪ್ರಮುಖ ಟ್ರಾವೆಲ್‌ ಪ್ಲ್ಯಾಟ್‌ಫಾರ್ಮ್‌ ಆದ Booking.com ಪ್ರಕಟಿಸಿರುವ ಟಾಪ್ 10 ಟ್ರೆಂಡಿಂಗ್‌ ಗ್ಲೋಬಲ್‌ ಡೆಸ್ಟಿನೇಶನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ನಗರ ಕೊಚ್ಚಿಯಾಗಿದ್ದು, ಕೇರಳ ಪ್ರವಾಸೋದ್ಯಮಕ್ಕೆ ಇದು ಮಹತ್ವದ ಸಾಧನೆ.

ಕೊಚ್ಚಿ ತನ್ನ ಐತಿಹಾಸಿಕ ಹಿನ್ನೆಲೆ, ಕರಾವಳಿ ಸೌಂದರ್ಯ ಮತ್ತು ವಿಶಿಷ್ಟ ಸಂಸ್ಕೃತಿಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಫೋರ್ಟ್ ಕೊಚ್ಚಿಯ ಚೀನೀ ಮೀನುಗಾರಿಕಾ ಬಲೆಗಳು, ಹಳೆಯ ಯುರೋಪಿಯನ್ ಶೈಲಿಯ ಮನೆಗಳು, ಕಲಾ ಗ್ಯಾಲರಿಗಳು ಹಾಗೂ ಬೀದಿ ಕಫೆಗಳು ನಗರಕ್ಕೆ ವಿಶಿಷ್ಟ ಮೆರುಗನ್ನು ನೀಡಿವೆ.

Chinese nets in Kochi


ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರು ಮಾತನಾಡಿ “ಕೊಚ್ಚಿಯ ಈ ಸಾಧನೆ ಕೇರಳದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಹುರುಪನ್ನು ತುಂಬಿದೆ. ಇದು ರಾಜ್ಯದ ನೈಸರ್ಗಿಕ ಸೌಂದರ್ಯ ಮತ್ತು ಅದ್ಭುತ ಆತಿಥ್ಯಕ್ಕೆ ನೀಡಿದ ಮನ್ನಣೆ” ಎಂದು ತಿಳಿಸಿದರು.

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿಶ್ವದ ಹಲವು ಭಾಗಗಳಿಂದ ನಗರವನ್ನು ಸುಲಭವಾಗಿ ಪ್ರವೇಶಿಸಬಹುದು. ಅಲ್ಲಿಂದ ಅಲೆಪ್ಪಿಯ ಬ್ಯಾಕ್‌ವಾಟರ್‌, ಮುನ್ನಾರ್ ಹಿಲ್ ಸ್ಟೇಷನ್‌ಗಳು ಹಾಗೂ ಕುಮಾರಕಮ್ ಸರೋವರ ಪ್ರದೇಶಗಳು ಪ್ರವಾಸಿಗರಿಗೆ ಹತ್ತಿರದಲ್ಲೇ ಲಭ್ಯ. ಸ್ಥಳೀಯ ಆಹಾರ, ಸಂಸ್ಕೃತಿ, ಮತ್ತು ಕಲಾ ಉತ್ಸವಗಳ ಸಂಯೋಜನೆಯಿಂದ ಕೊಚ್ಚಿ ಇದೀಗ ಜಾಗತಿಕ ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದೆ.