ಉತ್ತರಾಖಂಡದ ಮಸ್ಸೂರಿ–ಡೆಹ್ರಾಡೂನ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ಗಂಟೆಗಟ್ಟಲೆ ಪರದಾಡುವಂತಾಗಿದೆ. ಪಾನಿ ವಾಲಾ ಬೆಂಡ್‌ ಬಳಿ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಗುಡ್ಡವನ್ನು ಕತ್ತರಿಸುತ್ತಿದ್ದ ವೇಳೆ, ನಿರಂತರ ಮಳೆಯ ನಡುವೆ ಭೂಕುಸಿತ ಸಂಭವಿಸಿ ಭಾರೀ ಪ್ರಮಾಣದ ಮಣ್ಣು ಹಾಗೂ ಅವಶೇಷಗಳು ರಸ್ತೆಗೆ ಬಿದ್ದಿವೆ. ಇದರಿಂದ ಎರಡೂ ದಿಕ್ಕಿನ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸುಮಾರು 10 ಕಿಲೋಮೀಟರ್‌ವರೆಗೆ ವಾಹನಗಳ ಸಾಲು ಕಂಡುಬಂದಿದೆ. ದ್ವಿಚಕ್ರ ವಾಹನಗಳಿಗೂ ಸಂಚರಿಸಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸುರಕ್ಷತಾ ಕ್ರಮವಾಗಿ ಅಧಿಕಾರಿಗಳು ಹಲವು ಕಡೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ತಡೆದಿದ್ದರು. ಹೊರ ರಾಜ್ಯಗಳಿಂದ ಬಂದ ಪ್ರವಾಸಿಗರು ರಸ್ತೆ ಪರಿಸ್ಥಿತಿಯ ಅರಿವಿಲ್ಲದೆ ಹೆಚ್ಚು ಸಂಕಷ್ಟಕ್ಕೆ ಸಿಲುಕಿದರು. ಕೆಲಸಕ್ಕೆ ತೆರಳುತ್ತಿದ್ದವರು, ಆಸ್ಪತ್ರೆ ಹಾಗೂ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದವರಿಗೂ ತೊಂದರೆಯಾಯಿತು. ಆಂಬ್ಯುಲೆನ್ಸ್‌ಗಳೂ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದವು.

ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಯಂತ್ರೋಪಕರಣಗಳ ನೆರವಿನಿಂದ ರಸ್ತೆಯಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಆದರೆ, ಭೂಕುಸಿತದ ಪ್ರಮಾಣ ಹೆಚ್ಚಿರುವುದರಿಂದ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಸಮಯ ಬೇಕಾಗಬಹುದು. ನಿರಂತರ ಮಳೆ ಹಾಗೂ ಭೂಕುಸಿತದ ಅಪಾಯ ಇರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಸದ್ಯ ಮಸ್ಸೂರಿ ಮಾರ್ಗದಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.