ಹೋಮ್‌ಸ್ಟೇಗಳ ವಿಸಿಬಿಲಿಟಿ ಹೆಚ್ಚಿಸಲು ಸಿಕ್ಕಿಂ ಒತ್ತು
ಈ ನೂತನ ಒಪ್ಪಂದವು ಸಿಕ್ಕಿಂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಲಿದ್ದು, ಪ್ರಕೃತಿ ಪ್ರೇಮಿಗಳಿಗೆ ಮತ್ತು ಸಾಹಸಿ ಪ್ರವಾಸಿಗರಿಗೆ ಅತ್ಯುತ್ತಮ ಅನುಭವವನ್ನು ಖಾತ್ರಿಪಡಿಸಲಿದೆ.
ಸಿಕ್ಕಿಂ ರಾಜ್ಯದ ಪ್ರವಾಸೋದ್ಯಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಮತ್ತು ಗ್ರಾಮೀಣ ಭಾಗದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 'ಲಾಸ್ಟ್‌ಕ್ಲೂಸ್' ಸಂಸ್ಥೆಯು ಸಿಕ್ಕಿಂ ಪ್ರವಾಸೋದ್ಯಮ ಇಲಾಖೆಯೊಂದಿಗೆ ಅಧಿಕೃತವಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪಾಲುದಾರಿಕೆಯು ಸಿಕ್ಕಿಂನಲ್ಲಿರುವ ಸ್ಥಳೀಯ ಹೋಮ್‌ಸ್ಟೇಗಳ ವಿಸಿಬಿಲಿಟಿ ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ಪ್ರವಾಸಿಗರನ್ನು ನೇರವಾಗಿ ತಲುಪುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಮೂರೇ ಗಂಟೆಯಲ್ಲಿ ಸಿಕ್ಕಿಬಿದ್ದ 289 ಟಿಕೆಟ್ ರಹಿತ ಪ್ರಯಾಣಿಕರು
ಉತ್ತರ ಭಾರತದ ರಮಣೀಯ ಗಿರಿಧಾಮಗಳಲ್ಲಿ ಒಂದಾದ ಸಿಕ್ಕಿಂಗೆ ಆಗಮಿಸುವ ಪ್ರವಾಸಿಗರಿಗೆ ಹೊಟೇಲ್‌ಗಳ ಜತೆಗೆ ಅಧಿಕೃತ ಹಾಗೂ ನೈಸರ್ಗಿಕ ಅನುಭವ ನೀಡುವ ಹೋಮ್‌ಸ್ಟೇಗಳ ಬಗ್ಗೆ ಸರಿಯಾದ ಮಾಹಿತಿ ಸಿಗುವಂತೆ ಮಾಡುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ತಂತ್ರಜ್ಞಾನದ ಸಹಾಯದಿಂದ ಸ್ಥಳೀಯ ಆತಿಥ್ಯ ಉದ್ಯಮವನ್ನು ಬಲಪಡಿಸಲು ಈ ಹೆಜ್ಜೆ ನಿರ್ಣಾಯಕವಾಗಲಿದೆ.
ಲಾಸ್ಟ್‌ಕ್ಲೂಸ್ ಪ್ಲಾಟ್‌ಫಾರ್ಮ್ ಮೂಲಕ ಸಿಕ್ಕಿಂನ ಮೂಲೆಮೂಲೆಯಲ್ಲಿರುವ ಹೋಮ್‌ಸ್ಟೇಗಳ ಕುರಿತು ಜಾಗತಿಕ ಪ್ರವಾಸಿಗರಿಗೆ ಸುಲಭವಾಗಿ ಮಾಹಿತಿ ಲಭ್ಯವಾಗುವಂತೆ ಡಿಜಿಟಲ್ ಪ್ರಚಾರ ಹಾಗೂ ಮಾರ್ಕೆಟಿಂಗ್ ಮಾಡಲಾಗುತ್ತದೆ.
ದೊಡ್ಡ ಹೊಟೇಲ್‌ಗಳ ಬದಲಿಗೆ ಸ್ಥಳೀಯ ಗ್ರಾಮೀಣ ಕುಟುಂಬಗಳು ನಡೆಸುವ ಹೋಮ್‌ಸ್ಟೇಗಳಿಗೆ ಪ್ರವಾಸಿಗರನ್ನು ಆಕರ್ಷಿಸುವುದರಿಂದ, ಸ್ಥಳೀಯರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಸಮುದಾಯ ಆಧಾರಿತ ಪ್ರವಾಸೋದ್ಯಮ ಬೆಳೆಯಲು ಸಹಕಾರಿಯಾಗಲಿದೆ.
ಪ್ರವಾಸಿಗರು ಮುಂಚಿತವಾಗಿ ತಮ್ಮ ಪ್ರವಾಸವನ್ನು ಯೋಜಿಸಲು ಮತ್ತು ಅತ್ಯುತ್ತಮ ಹೋಮ್‌ಸ್ಟೇಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ಕಾಯ್ದಿರಿಸಲು ಸುಧಾರಿತ ತಂತ್ರಜ್ಞಾನದ ನೆರವು ನೀಡಲಾಗುತ್ತದೆ.