ಮೂರೇ ಗಂಟೆಯಲ್ಲಿ ಸಿಕ್ಕಿಬಿದ್ದ 289 ಟಿಕೆಟ್ ರಹಿತ ಪ್ರಯಾಣಿಕರು
ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 289 ಜನರಿಂದ ನಿಯಮಾನುಸಾರ ದಂಡವನ್ನು ವಿಧಿಸಲಾಗಿದ್ದು, ಕೇವಲ ಮೂರು ಗಂಟೆಗಳಲ್ಲಿ ಒಟ್ಟು 1,75,489 ರುಪಾಯಿಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ.
ಕೇರಳದ ಎರ್ನಾಕುಲಂ ಟೌನ್ ರೈಲು ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳು ನಡೆಸಿದ ಹಠಾತ್ ಹಾಗೂ ತೀವ್ರ ತಪಾಸಣೆಯ ವೇಳೆ, ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಸರಿಯಾದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಬರೋಬ್ಬರಿ 289 ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ. ತಿರುವನಂತಪುರಂ ವಿಭಾಗದ ಟಿಕೆಟ್ ತಪಾಸಣಾ ದಳವು (Ticket Checking Squad) ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಇದನ್ನೂ ಓದಿ: ಆಗಸ್ಟ್‌ನಲ್ಲಿ ರೈಲ್ವೇಯಿಂದ 67.27 ಕೋಟಿ ಪ್ರಯಾಣಿಕರ ಸಂಚಾರ
ರೈಲು ಪ್ರಯಾಣಿಕರ ನಡುವೆ ಟಿಕೆಟ್ ರಹಿತ ಪ್ರಯಾಣವನ್ನು ಸಂಪೂರ್ಣವಾಗಿ ತಡೆಯಲು ಮತ್ತು ರೈಲ್ವೇ ಇಲಾಖೆಯ ಆದಾಯ ಸೋರಿಕೆಯನ್ನು ತಪ್ಪಿಸಲು ಈ 'ಕೋಟೆ ಮಾದರಿಯ ತಪಾಸಣೆ'ಯನ್ನು (Fortress Check) ಕೈಗೊಳ್ಳಲಾಗಿತ್ತು. ನಿಲ್ದಾಣದಲ್ಲಿ ಭಾನುವಾರ ಸಂಜೆ 4:00 ಗಂಟೆಯಿಂದ ರಾತ್ರಿ 7:00 ರವರೆಗೆ ಕೇವಲ ಮೂರು ಗಂಟೆಗಳ ಕಾಲ ನಡೆಸಿದ ಈ ದಿಢೀರ್ ಕಾರ್ಯಾಚರಣೆಯು ಪ್ರಯಾಣಿಕರಲ್ಲಿ ಸಂಚಲನ ಮೂಡಿಸಿತು.
ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 289 ಜನರಿಂದ ನಿಯಮಾನುಸಾರ ದಂಡವನ್ನು ವಿಧಿಸಲಾಗಿದ್ದು, ಕೇವಲ ಮೂರು ಗಂಟೆಗಳಲ್ಲಿ ಒಟ್ಟು 1,75,489 ರುಪಾಯಿಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ. ತಿರುವನಂತಪುರಂ ವಿಭಾಗೀಯ ಸಿಬ್ಬಂದಿ ಹಾಗೂ ರೈಲ್ವೇ ರಕ್ಷಣಾ ಪಡೆ ಜಂಟಿಯಾಗಿ ನಿಲ್ದಾಣದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಿ ಈ ತೀವ್ರ ಪರಿಶೀಲನೆ ನಡೆಸಿದರು.
ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣವನ್ನು ತಡೆಯುವ ನಿಟ್ಟಿನಲ್ಲಿ ಇಂಥ ಕಠಿಣ ತಪಾಸಣಾ ಅಭಿಯಾನಗಳನ್ನು ಮುಂದೆಯೂ ಮುಂದುವರಿಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.