ವಾರಾಣಸಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಹಾರಿದ ಗುಂಡು: ಇಬ್ಬರಿಗೆ ಗಾಯ!
ನಿಗದಿತ ತಪಾಸಣಾ ಕೊಠಡಿಯಲ್ಲಿ ಶಸ್ತ್ರಾಸ್ತ್ರ ಮತ್ತು ಗುಂಡುಗಳನ್ನು ಪರಿಶೀಲಿಸುವಾಗ ಮತ್ತು ಮ್ಯಾಗಜೀನ್ ತೆಗೆಯುವಾಗ, ಚೇಂಬರ್‌ನಲ್ಲಿ ಉಳಿದುಕೊಂಡಿದ್ದ ಒಂದು ಗುಂಡು ಆಕಸ್ಮಿಕವಾಗಿ ಡಿಸ್ಚಾರ್ಜ್ ಆಗಿದೆ.
ಉತ್ತರ ಪ್ರದೇಶದ ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಪ್ರಕ್ರಿಯೆಯ ಸಮಯದಲ್ಲಿ ಪಿಸ್ತೂಲ್ ಒಂದರಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಇಬ್ಬರು ಆಟೋಮೇಷನ್ ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ.
ಇದನ್ನೂ ಓದಿ: ಗಂಗಾ ತೀರದಲ್ಲಿ ವಾರದ ಆರೋಗ್ಯ–ಯೋಗ ಕಾರ್ಯಕ್ರಮ
ಅಜಂಫಗಢ ಮೂಲದ ಪ್ರಯಾಣಿಕ ಕಮಲೇಶ್ ಕೇದಾರ್‌ನಾಥ್ ರೈ (55) ಅವರು ತಮ್ಮ ಪತ್ನಿಯೊಂದಿಗೆ ಮುಂಬೈಗೆ ತೆರಳಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಏರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ನಿಯಮಾವಳಿಗಳಂತೆ ಅವರು ತಮ್ಮ ಬಳಿ ಇದ್ದ ಲೈಸೆನ್ಸ್ಡ್ 7.62mm ಪಿಸ್ತೂಲ್ ಮತ್ತು 21 ಲೈವ್ ಕಾರ್ಟ್‌ರಿಜ್ ವಿವರವನ್ನು ಚೆಕ್-ಇನ್ ಕೌಂಟರ್‌ನಲ್ಲಿ ಘೋಷಿಸಿದ್ದರು.
ನಿಗದಿತ ತಪಾಸಣಾ ಕೊಠಡಿಯಲ್ಲಿ ಶಸ್ತ್ರಾಸ್ತ್ರ ಮತ್ತು ಗುಂಡುಗಳನ್ನು ಪರಿಶೀಲಿಸುವಾಗ ಮತ್ತು ಮ್ಯಾಗಜೀನ್ ತೆಗೆಯುವಾಗ, ಚೇಂಬರ್‌ನಲ್ಲಿ ಉಳಿದುಕೊಂಡಿದ್ದ ಒಂದು ಗುಂಡು ಆಕಸ್ಮಿಕವಾಗಿ ಡಿಸ್ಚಾರ್ಜ್ ಆಗಿದೆ. ಪಿಸ್ತೂಲ್‌ನಿಂದ ಹಾರಿದ ಗುಂಡು ಗಟ್ಟಿಯಾದ ಮೇಲ್ಮೈಗೆ ಬಡಿದು ರೀಕೌಚೆಟ್ ಆಗಿದ್ದರಿಂದ ಹತ್ತಿರದಲ್ಲೇ ತಪಾಸಣೆ ನಡೆಸುತ್ತಿದ್ದ ಇಬ್ಬರು ಸಿಬ್ಬಂದಿಗೆ ತಗುಲಿದೆ.
ಈ ದುರಂತದಲ್ಲಿ ವಿಮಾನ ನಿಲ್ದಾಣದ ಸ್ಕ್ರೀನರ್‌ಗಳಾದ ಸುಮನ್ ಕುಮಾರಿ (ಕಾಲುಗಳಿಗೆ) ಹಾಗೂ ರೋಹಿತ್ ರಾಜ್ (ಕಾಲಿನ ಹೆಬ್ಬೆರಳಿಗೆ) ಗಾಯಗೊಂಡಿದ್ದಾರೆ. ತಕ್ಷಣವೇ ಇಬ್ಬರನ್ನೂ ಹತ್ತಿರದ ಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ.
ಘಟನೆ ನಡೆದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯದ ನಡವಳಿಕೆಯಿಂದ ಗಾಯಗೊಳಿಸಿದ ಆರೋಪದ ಮೇಲೆ ಪ್ರಯಾಣಿಕ ಕಮಲೇಶ್ ರೈ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125(a) ಮತ್ತು 125(b) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಶಸ್ತ್ರಾಸ್ತ್ರ ಪರಿಶೀಲನೆ ನಡೆಸುವಾಗ ಪಾಲಿಸಬೇಕಾದ ಸುರಕ್ಷತಾ ಶಿಷ್ಟಾಚಾರಗಳ ಕುರಿತು ತನಿಖೆ ಮುಂದುವರಿದಿದೆ.