ಯಾಹಿಯಾಗಂಜ್ ಗುರುದ್ವಾರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲು ನಿರ್ಧಾರ
ಗುರುದ್ವಾರದ ಒಳಭಾಗದಲ್ಲಿ ಸಿಖ್ ಪರಂಪರೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳ ವಿಶೇಷ ಕಲಾ ಗ್ಯಾಲರಿ ಇದ್ದು, ಗುರುಗಳ ಜೀವನ ಹಾಗೂ ಇತಿಹಾಸವನ್ನು ಹೇಳುವ ಅಪರೂಪದ ಚಿತ್ರಗಳು ಮತ್ತು ವಸ್ತುಗಳು ಇಲ್ಲಿ ಪ್ರದರ್ಶನಕ್ಕಿವೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಲಖನೌನ ಐತಿಹಾಸಿಕ ಯಾಹಿಯಾಗಂಜ್ ಗುರುದ್ವಾರಾವನ್ನು ರಾಜ್ಯದ ಪ್ರಮುಖ ಸಿಖ್ ಪಾರಂಪರಿಕ ಕೇಂದ್ರ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ಸರಕಾರ 2 ಕೋಟಿ ರು. ಅನುದಾನವನ್ನು ಮಂಜೂರು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜ್ಯದ ಪರಂಪರೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿರುವ ಈ ಗುರುದ್ವಾರಾವು, ಶೀಘ್ರದಲ್ಲೇ ಸುಧಾರಿತ ಸೌಕರ್ಯಗಳ ಮೂಲಕ ಹಾಗೂ ಮತ್ತಷ್ಟು ಸುಂದರಗೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದೆ.

ಯಾಹಿಯಾಗಂಜ್ ಗುರುದ್ವಾರವು ಸಿಖ್ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಗುರು ತೆಗ್ ಬಹಾದೂರ್ ಅವರು 1670ರಲ್ಲಿ ಹಾಗೂ ಗುರು ಗೋಬಿಂದ್ ಸಿಂಗ್ ಅವರು 1672ರಲ್ಲಿ ಇಲ್ಲಿ ತಂಗಿದ್ದರೆಂದು ದಾಖಲೆಗಳಿವೆ.
ಗುರುದ್ವಾರದ ಒಳಭಾಗದಲ್ಲಿ ಸಿಖ್ ಪರಂಪರೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳ ವಿಶೇಷ ಕಲಾ ಗ್ಯಾಲರಿ ಇದ್ದು, ಗುರುಗಳ ಜೀವನ ಹಾಗೂ ಇತಿಹಾಸವನ್ನು ಹೇಳುವ ಅಪರೂಪದ ಚಿತ್ರಗಳು ಮತ್ತು ವಸ್ತುಗಳು ಇಲ್ಲಿ ಪ್ರದರ್ಶನಕ್ಕಿವೆ. ಜತೆಗೆ ಗುರುಗಳ ಹುಕಂನಾಮಾಸ್ ಹಾಗೂ ಮೂಲ ಮಂತ್ರವಿರುವ ಗುರು ಗ್ರಂಥ್ ಸಾಹಿಬ್ ಪ್ರತಿಯನ್ನೂ ಇಲ್ಲಿ ಸಂರಕ್ಷಿಸಲಾಗಿದೆ.
ಬಿಡುಗಡೆಯಾದ 2 ಕೋಟಿ ರು. ಅನುದಾನವನ್ನು ಗುರುದ್ವಾರಕ್ಕೆ ಪ್ರವೇಶ ನೀಡುವ ಮಾರ್ಗಗಳ ಅಭಿವೃದ್ಧಿಗೆ, ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಗುರುದ್ವಾರದ ಅಂದವನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕಾರ್ಯಗಳ ಮೇಲೆ ವಿನಿಯೋಗಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.