ಮೇಘಾಲಯದ ಅತ್ಯಂತ ಜನಪ್ರಿಯ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಸೊಹ್ರಾ ವಲಯದಲ್ಲಿ ಪ್ರಕೃತಿಯನ್ನು ರಕ್ಷಿಸಲು ಹಾಗೂ ಸಾರ್ವಜನಿಕ ನೈರ್ಮಲ್ಯವನ್ನು ಕಾಯ್ದುಕೊಳ್ಳಲು ಮೇಘಾಲಯ ಸರಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪ್ರದೇಶದಾದ್ಯಂತ ಮುಖ್ಯ ರಸ್ತೆಗಳ ಬದಿಗಳಲ್ಲಿ ಹಾಗೂ ಪ್ರವಾಸಿ ತಾಣಗಳ ತೆರೆದ ಜಾಗಗಳಲ್ಲಿ ರಸ್ತೆಬದಿ ಪಿಕ್ನಿಕ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ; ಮೇಘಾಲಯದ ಜೀವಂತ ಬೇರು ಸೇತುವೆಗಳಿಗೆ ಅಸ್ತು ಎನ್ನದ ಯುನೆಸ್ಕೋ

ಪ್ರವಾಸಿಗರು ರಸ್ತೆಬದಿಗಳಲ್ಲಿ ಪಿಕ್ನಿಕ್ ಆಯೋಜಿಸಿ, ಆಹಾರ ಬೇಯಿಸುವುದು, ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಸುಂದರ ಹಿಮಾಲಯನ್ ಕಣಿವೆ ಪರಿಸರವು ಕಲುಷಿತಗೊಳ್ಳುತ್ತಿತ್ತು. ಜತೆಗೆ ರಸ್ತೆಬದಿ ನಿಲ್ಲಿಸುವ ವಾಹನಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿತ್ತು. ಇದನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ರಸ್ತೆಬದಿಗಳು, ಸೇತುವೆಗಳ ಮೇಲೆ, ಜಲಪಾತಗಳ ಸಮೀಪದ ತೆರೆದ ಪ್ರದೇಶಗಳಲ್ಲಿ ಹಾಗೂ ವ್ಯೂ ಪಾಯಿಂಟ್‌ಗಳ ಬಳಿ ಪ್ರವಾಸಿಗರು ಆಹಾರ ತಯಾರಿಸುವುದು ಮತ್ತು ಪಿಕ್ನಿಕ್ ಮಾಡುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಖಾಲಿ ಬಾಟಲಿಗಳು ಮತ್ತು ಆಹಾರದ ತ್ಯಾಜ್ಯ ಚೆಲ್ಲುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆಯಡಿ ಭಾರಿ ದಂಡ ವಿಧಿಸಲಾಗುವುದು. ಪ್ರವಾಸಿಗರು ಸರಕಾರ ಅಥವಾ ಸ್ಥಳೀಯ ಗ್ರಾಮ ಮಂಡಳಿಗಳು ಗುರುತಿಸಿರುವ ನಿಗದಿತ ಝೋನ್‌ಗಳಲ್ಲಿ ಮಾತ್ರ ಪಿಕ್ನಿಕ್ ಮಾಡಲು ಅವಕಾಶವಿರುತ್ತದೆ.

ಪೂರ್ವ ಖಾಸಿ ಹಿಲ್ಸ್ ಜಿಲ್ಲಾಡಳಿತವು ಪ್ರವಾಸಿ ತಾಣಗಳಲ್ಲಿ ಗಸ್ತು ತಿರುಗಲು ಮತ್ತು ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲು ಕಾನೂನು ಜಾರಿಗೊಳಿಸುವ ತಂಡಗಳನ್ನು ನಿಯೋಜಿಸಿದೆ. ಸೊಹ್ರಾ ಹಾಗೂ ಮೌಸಿನ್‌ರಾಮ್‌ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ನೈಸರ್ಗಿಕ ಸೌಂದರ್ಯವನ್ನು ಆನಂದಿಸುವಾಗ ಪ್ರಕೃತಿಗೆ ಹಾನಿಯಾಗದಂತೆ ಹಾಗೂ ಸ್ಥಳೀಯ ಶುಚಿತ್ವ ನಿಯಮಗಳನ್ನು ಪಾಲಿಸುವಂತೆ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.