ಹಾಲಿನ ಬೆಲೆ ಏರಿಕೆ: ಸಂಕಷ್ಟದಲ್ಲಿ ಹೊಟೇಲ್ ಉದ್ಯಮ
ಹಾಲಿನ ದರ ಏರಿಕೆಯ ಜತೆಗೆ ಇತ್ತೀಚೆಗೆ ದಿನದಿಂದ ದಿನಕ್ಕೆ ಅಕ್ಕಿಯ ಬೆಲೆ ಹೆಚ್ಚಳವಾಗುತ್ತಿದೆ. ಇದು ನಿಯಂತ್ರಣಕ್ಕೆ ಬಾರದ ಕಾರಣ ಹೊಟೇಲುಗಳಲ್ಲಿ ಕಾಫಿ/ಟೀ, ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಬೆಂಗಳೂರು ಹೋಟೆಲುಗಳ ಸಂಘ ತಿಳಿಸಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 8ರು. ಏಕಾಏಕಿ ಹೆಚ್ಚಿಸುವ ನಿರ್ಧಾರ ಸರಕಾರ ತೆಗೆದುಕೊಂಡಿರುವುದರ ಬಗ್ಗೆ ಬೆಂಗಳೂರು ಹೊಟೇಲುಗಳ ಸಂಘ ದನಿ ಎತ್ತಿದೆ.
ಈಗ ಮಾಡಲು ಹೊರಟಿರುವ ಅತಿಯಾದ ಬೆಲೆ ಏರಿಕೆಯ ಪರಿಣಾಮವಾಗಿ ಕಾಫಿ, ಟೀ ಸೇರಿದಂತೆ ಹಾಲಿನಿಂದ ತಯಾರಾಗುವ ಎಲ್ಲ ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ. ಇದಲ್ಲದೆ ಪೌಷ್ಠಿಕ ಆಹಾರವಾಗಿ ಉಪಯೋಗಿಸುವ ಜನಸಾಮಾನ್ಯರಿಗೆ, ಹಿರಿಯ ನಾಗರೀಕರಿಗೆ, ಗರ್ಭಿಣಿಯರಿಗೆ, ಮಕ್ಕಳಿಗೆ ಇದು ಬಹುದೊಡ್ಡ ಹೊಡೆತವಾಗಲಿದೆ. ನಮ್ಮ ಹೆಮ್ಮೆಯ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ಸೀಮಿತಗೊಳಿಸಿ ಇನ್ನೂ ಹೆಚ್ಚು ಉಪಯೋಗಿಸಲು ಸರಕಾರ ಪ್ರೋತ್ಸಾಹಿಸಬೇಕು. ಡೈರಿ ಉದ್ಯಮದ ಆಡಳಿತಾತ್ಮಕ ವೆಚ್ಚವನ್ನು ಸರಕಾರ ಹತೋಟಿಗೆ ತರುವುದರ ಜತೆಗೆ ರೈತರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಬೆಲೆ ಏರಿಕೆಯನ್ನು ಸೀಮಿತಗೊಳಿಸಬೇಕು.
ಈ ರೀತಿಯ ದೊಡ್ಡ ಪ್ರಮಾಣದ ಬೆಲೆ ಏರಿಕೆ ಮಾಡುವಾಗ ಜನಸಾಮಾನ್ಯರ ಬಗ್ಗೆ ಚಿಂತನ-ಮಂತನ ನಡೆಸುವುದು ಕೂಡ ಅತ್ಯಗತ್ಯ ಎಂದು ಬೆಂಗಳೂರು ಹೊಟೇಲುಗಳ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಹಾಲಿನ ದರ ಏರಿಕೆಯ ಜತೆಗೆ ಇತ್ತೀಚೆಗೆ ದಿನದಿಂದ ದಿನಕ್ಕೆ ಅಕ್ಕಿಯ ಬೆಲೆ ಹೆಚ್ಚಳವಾಗುತ್ತಿದೆ. ಇದು ನಿಯಂತ್ರಣಕ್ಕೆ ಬಾರದ ಕಾರಣ ಹೊಟೇಲುಗಳಲ್ಲಿ ಕಾಫಿ/ಟೀ, ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಬೆಂಗಳೂರು ಹೋಟೆಲುಗಳ ಸಂಘ ತಿಳಿಸಿದೆ.