ಮಿಜೋರಾಂ ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ನೀತಿ ಆಯೋಗ ಮತ್ತು ರಾಜ್ಯ ಸರಕಾರವು ಜಂಟಿಯಾಗಿ ಟೂರಿಸಂ ಕಾನ್‌ಕ್ಲೇವ್ (Tourism Conclave) ಆಯೋಜಿಸಲು ತೀರ್ಮಾನಿಸಿವೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಮಿಜೋರಾಂ ರಾಜ್ಯದ ಪ್ರವಾಸೋದ್ಯಮ ಸಚಿವ ಲಾಂಘಿಂಗ್ಲೋವಾ ಹ್ಮಾರ್ ಮತ್ತು ನೀತಿ ಆಯೋಗದ ಸದಸ್ಯರಾದ ವಿ.ಕೆ. ಪೌಲ್ ಭಾಗವಹಿಸಿ ಈ ಬಗ್ಗೆ ಚರ್ಚೆ ನಡೆಸಿದರು.

ಈ ಕಾನ್‌ಕ್ಲೇವ್‌ನಲ್ಲಿ ರಾಜ್ಯ ಸರಕಾರದ ಅಧಿಕಾರಿಗಳು, ಖಾಸಗಿ ವಲಯದ ಪ್ರತಿನಿಧಿಗಳು, ಹೊಟೇಲ್ ಮತ್ತು ಪ್ರವಾಸೋದ್ಯಮ ಸಂಸ್ಥೆಗಳು, ಶಿಕ್ಷಣ ಕ್ಷೇತ್ರದ ತಜ್ಞರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.

Tourism conclave by NITI Aayog and Mizoram

ಮಿಜೋರಾಂನ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ವೈಶಿಷ್ಟ್ಯವನ್ನು ಪ್ರವಾಸಿಗರಿಗೆ ಪರಿಚಯಿಸುವುದರ ಜತೆಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸುಸ್ಥಿರ ಪ್ರವಾಸೋದ್ಯಮದ ಉತ್ತೇಜನೆ ಈ ಕಾನ್‌ಕ್ಲೇವ್‌ನ ಉದ್ದೇಶವಾಗಿದೆ.

ಸಚಿವರು ಮಾತನಾಡಿ “ಇತ್ತೀಚಿಗೆ ನಡೆದ ರೈಲ್ವೆ ಸಂಪರ್ಕ ವಿಸ್ತರಣೆಯಿಂದಾಗಿ ರಾಜ್ಯಕ್ಕೆ ಭೇಟಿನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2024ರ ಅಗಸ್ಟ್–ಸೆಪ್ಟೆಂಬರ್ ಅವಧಿಯಲ್ಲಿ 1.27 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡಿದ್ದು, ಇದರಲ್ಲಿ 2,000ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಸೇರಿದ್ದಾರೆ” ಎಂದು ತಿಳಿಸಿದರು.