ಚಾಮುಂಡಿ ಬೆಟ್ಟದಲ್ಲಿ ಮೊಬೈಲ್ ಕ್ಯಾಮರಾ ನಿಷೇಧ, ರೀಲ್ಸ್ ಬ್ಯಾನ್
ಆಷಾಢ ಮಾಸ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ಆಚರಣೆಗಳು ಇರಲಿದ್ದು, ಶಿಸ್ತು ಹಾಗೂ ಸುರಕ್ಷತೆಯ ಉದ್ದೇಶದಿಂದ ದೇವಾಲಯದ ಆವರಣದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮೊಬೈಲ್ ಹಾಗೂ ಕ್ಯಾಮರಾದಲ್ಲಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಷಾಢ ಮಾಸ ಹಿನ್ನೆಲೆಯಲ್ಲಿ ಅಷಾಢ ಶುಕ್ರವಾರದಂದು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದ್ದು, ಈ ವೇಳೆ ದೇವಾಲಯದಲ್ಲಿ ಉತ್ಸವ ಮೂರ್ತಿ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮರದಲ್ಲಿ ರೀಲ್ಸ್ ಮಾಡುವುದು ಹಾಗೂ ಫೊಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರು, ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಾಧಿಕಾರದ ವತಿಯಿಂದಲೇ ಉತ್ಸವ ಮೂರ್ತಿಯ ಫೊಟೋ ಹಾಗೂ ವಿಡಿಯೋ ಚಿತ್ರೀಕರಿಸಿ ಮತ್ತು ನೇರಪ್ರಸಾರವನ್ನು ಮಾಡಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರು ಫೊಟೋ ಅಥವಾ ವಿಡಿಯೋ ಮಾಡಿದ್ದು ಕಂಡುಬಂದಲ್ಲಿ ಮೊಬೈಲ್ ಇಲ್ಲವೇ ಕ್ಯಾಮರವನ್ನು ಶಾಶ್ವತವಾಗಿ ವಶಪಡಿಸಿಕೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಖಾಸಗಿ ವಾಹನಗಳಿಗಿಲ್ಲ ಪ್ರವೇಶ
ಆಷಾಢ ಮಾಸದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಯಾವುದೇ ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶವಿರುವುದಿಲ್ಲ. ಈ ದಿನಗಳಲ್ಲಿ ಲಲಿತ ಮಹಲಿನ ಆವರಣದಿಂದ ಚಾಮುಂಡಿ ಬೆಟ್ಟಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವತಿಯಿಂದ ಉಚಿತ ಬಸ್ ಸೇವೆ ಮತ್ತು ವಾಹನ ನಿಲುಗಡೆ ಮಾಡಲಾಗಿದೆ.
ಲಲಿತ ಮಹಲ್ ನಲ್ಲಿ ದರ್ಶನದ ಟಿಕೆಟ್
ಎಲ್ಲ ವಿಶೇಷ ದರ್ಶನದ ಟಿಕೆಟ್ ಗಳನ್ನು ಲಲಿತ ಮಹಲ್ ಆವರಣದಲ್ಲಿ ನೀಡಲಾಗುತ್ತದೆ. ಬೆಟ್ಟದ ಮೇಲೆ ಯಾವುದೇ ವಿಶೇಷ ದರ್ಶನದ ಟಿಕೆಟ್ ಗಳನ್ನು ನೀಡಲಾಗುವುದಿಲ್ಲ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ. ಅಲ್ಲದೆ ಧರ್ಮ ದರ್ಶನ, 300 ರು. ವಿಶೇಷ ದರ್ಶನಕ್ಕೆ 2000 ರುಪಾಯಿ ಹೀಗೆ ವಿವಿಧ ಬಗೆಯ ದರ್ಶನದ ವ್ಯವಸ್ಥೆಯನ್ನು ಮಾಡಿ, ಇದಕ್ಕೆ ಅನುಗುಣವಾಗುವಂತೆ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.