ಮುಂಬಯಿ ಮೆಟ್ರೋದಲ್ಲಿ ಬೆಕ್ಕಿಗೆ ಹೊಸ ಹುದ್ದೆ
ಮುಂಬಯಿನ ಗುಂಡವಲಿ ಮೆಟ್ರೋ ನಿಲ್ದಾಣದಲ್ಲಿ ಓಡಾಡುತ್ತಿದ್ದ ಶುಂಠಿ ಬಣ್ಣದ ಬೆಕ್ಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಮುಂಬಯಿನ ಗುಂಡವಲಿ ಮೆಟ್ರೋ ನಿಲ್ದಾಣದಲ್ಲಿ ಓಡಾಡುತ್ತಿದ್ದ ಶುಂಠಿ ಬಣ್ಣದ ಬೆಕ್ಕೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಮಹಾ ಮುಂಬಯಿ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಈ ಬೆಕ್ಕಿಗೆ ತಮಾಷೆಯಾಗಿ ‘ಚೀಫ್ ಫೆಲೈನ್ ಆಫೀಸರ್’ (CFO) ಎಂಬ ಗೌರವ ಹುದ್ದೆ ನೀಡಿದೆ.
ಗುಂಡವಲಿ ನಿಲ್ದಾಣದ ಪ್ರವೇಶದ್ವಾರದ ಬಳಿ ಬೆಕ್ಕು ಕುಳಿತಿರುವ ಚಿತ್ರವನ್ನು ಪ್ರಯಾಣಿಕ ಸಂದೇಶ್ ಸಾಮಂತ್ ಹಂಚಿಕೊಂಡಿದ್ದರು. ‘ಈ ಬೆಕ್ಕು ಉಚಿತವಾಗಿ ಕೆಲಸ ಮಾಡುತ್ತಿದೆ, ಇದಕ್ಕೆ ಅಧಿಕೃತ ಹುದ್ದೆ ನೀಡಿ’ ಎಂದು ಅವರು ಮೆಟ್ರೋ ಸಂಸ್ಥೆಯನ್ನು ತಮಾಷೆಯಾಗಿ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ MMMOCL, ಬೆಕ್ಕಿಗೆ ಹೊಸ ಹುದ್ದೆ ನೀಡಿರುವುದಾಗಿ ಘೋಷಿಸಿತು.
ಬೆಕ್ಕಿನ ‘ಕರ್ತವ್ಯ’ಗಳಲ್ಲಿ ನಿಲ್ದಾಣ ಪರಿಶೀಲನೆ, ಪ್ರಯಾಣಿಕರನ್ನು ಗಮನಿಸುವುದು ಹಾಗೂ ಎಲ್ಲರ ಗಮನ ಸೆಳೆಯುವ ಸ್ಥಳದಲ್ಲಿ ಕುಳಿತುಕೊಳ್ಳುವುದು ಸೇರಿವೆ ಎಂದು ಸಂಸ್ಥೆ ಹಾಸ್ಯಮಯವಾಗಿ ಹೇಳಿದೆ. ಅದರ ಕಾರ್ಯಕ್ಷಮತೆಯೂ ‘ಪರ್ಫೆಕ್ಟ್’ ಎಂದು ಮೆಟ್ರೋ ಸಂಸ್ಥೆ ಹೇಳಿಕೊಂಡಿದೆ. ಈ ತಮಾಷೆಯ ನೇಮಕಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.