ವಿಶ್ವಪ್ರಸಿದ್ಧ ವೈಷ್ಣವ ಧಾರ್ಮಿಕ ಕೇಂದ್ರವಾಗಿರುವ ಉಡುಪಿ ಶ್ರೀಕೃಷ್ಣ ಮಠವು ಇಲ್ಲಿಗೆ ಭೇಟಿ ನೀಡುವ ಭಕ್ತರಿಗಾಗಿ ವಿಶೇಷ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಇದರ ಪ್ರಕಾರ, ದೇವಸ್ಥಾನದ ಒಳಗೆ ಪ್ರವೇಶ ಮಾಡಲು ಭಕ್ತರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಲೇಬೇಕಾಗಿದೆ. ಪುರುಷರು ತಮ್ಮ ಶರ್ಟ್‌ಗಳನ್ನು ದರ್ಶನದ ಸಮಯದಲ್ಲಿ ತೆಗೆದುಹಾಕಲೇಬೇಕು. ಇನ್ನು, ಮಹಿಳಾ ಭಕ್ತರು ಪಾಶ್ಚಿಮಾತ್ಯ ಉಡುಗೆಗಳಾದ ಶರ್ಟ್‌, ಜೀನ್ಸ್‌, ತೋಳಿಲ್ಲದ ಬಟ್ಟೆ, ಶಾರ್ಟ್ಸ್‌ಗಳನ್ನು ಧರಿಸುವಂತಿಲ್ಲ. ಬದಲಾಗಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದರೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ ನೀಡಲಾಗುತ್ತದೆ. ಈ ಹೊಸ ವಸ್ತ್ರ ಸಂಹಿತೆಯು ಶ್ರೀಕೃಷ್ಣ ಮಠದ ಪಾವಿತ್ರ್ಯತೆ ಕಾಪಾಡುವ ಹಾಗೂ ಸಾಂಪ್ರದಾಯಿಕ ಪದ್ಧತಿ, ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಶಿರೂರು ಮಠವು ತಿಳಿಸಿದೆ.