ಪ್ರವಾಸಿಗರ ಸುರಕ್ಷತೆ ಮತ್ತು ಪ್ರಕೃತಿ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಿಂದ ಒಮಾನ್‌ ಸರಕಾರವು ಸಾಹಸ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಒಮಾನ್‌ನ ಹೆರಿಟೇಜ್ ಮತ್ತು ಟೂರಿಸಂ ಸಚಿವಾಲಯ ಈ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅಡ್ವೆಂಚರ್‌ ಟೂರಿಸಂಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು ಮತ್ತು ಆಯೋಜಕರು ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಕ್ಯಾಂಯನಿಂಗ್, ರಾಕ್ ಕ್ಲೈಂಬಿಂಗ್, ಹೈಕಿಂಗ್, ಜಿಪ್‌ಲೈನ್ ಸೇರಿದಂತೆ ವಿವಿಧ ಹೊರಾಂಗಣ ಸಾಹಸ ಚಟುವಟಿಕೆಗಳು ಈ ನಿಯಮಗಳ ವ್ಯಾಪ್ತಿಗೆ ಬರುತ್ತವೆ.

oman adventure tourism

ಹೊಸ ನಿಯಮಗಳ ಪ್ರಕಾರ, ಯಾವುದೇ ಸಾಹಸ ಚಟುವಟಿಕೆಯನ್ನು ಆಯೋಜಿಸುವ ಮೊದಲು ಸಂಬಂಧಿತ ಅಧಿಕಾರಿಗಳಿಂದ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜತೆಗೆ, ಪ್ರವಾಸಿಗರಿಗೆ ಬಳಸುವ ಎಲ್ಲಾ ಸುರಕ್ಷತಾ ಉಪಕರಣಗಳ ಗುಣಮಟ್ಟದ ಪರಿಶೀಲನೆ ಮತ್ತು ಮಾನ್ಯತೆ ಪಡೆದಿರಬೇಕು. ಹಳೆಯ ಅಥವಾ ಹಾನಿಗೊಳಗಾದ ಸಾಧನಗಳ ಬಳಕೆಗೆ ನಿಷೇಧ ಹೇರಲಾಗಿದೆ.

ಅದೇ ರೀತಿ, ಸಾಹಸ ಚಟುವಟಿಕೆಗಳು ನಡೆಯುವ ಸ್ಥಳಗಳಲ್ಲಿ ಈಗಾಗಲೇ ಸ್ಥಾಪಿಸಿರುವ ಸುರಕ್ಷತಾ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡುವುದನ್ನು ಕಠಿಣವಾಗಿ ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

ಈ ಕ್ರಮಗಳ ಮೂಲಕ ಒಮಾನ್ ಸರಕಾರವು ಅಡ್ವೆಂಚರ್‌ ಟೂರಿಸಂ ಅನ್ನು ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.