ಜಮ್ಮು–ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಪಹಲ್ಗಾಮ್ ಪ್ರವಾಸೋದ್ಯಮ ಹಬ್ಬವನ್ನು ಆರಂಭಿಸಲಾಗಿದೆ. ಪಹಲ್ಗಾಮ್ ಡೆವಲಪ್‌ಮೆಂಟ್ ಅಥಾರಿಟಿ (PDA) ಹಾಗೂ ಸಂಬಂಧಿತ ಇಲಾಖೆಗಳ ಸಹಕಾರದಲ್ಲಿ ಈ ಹಬ್ಬವನ್ನು ಆಯೋಜಿಸಲಾಗಿದ್ದು, ಇದು ವರ್ಷಾಂತ್ಯದವರೆಗೆ ನಡೆಯಲಿದೆ.

ಸರ್ವ ಋತುಗಳಲ್ಲೂ ಪ್ರವಾಸ ಕೈಗೊಳ್ಳುವುದಕ್ಕೆ ಪಹಲ್ಗಾಮ್‌ ಸೂಕ್ತವೆಂದು ಸಾರುವುದು ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ. ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಸಾಹಸ ಪ್ರವಾಸೋದ್ಯಮ ಮತ್ತು ಆತಿಥ್ಯ ಸೇವೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

Pahalgam tourism

ಈ ಸಂದರ್ಭದಲ್ಲಿ ಮಾತನಾಡಿದ PDA ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಲಾಲ್ ಅಹಮದ್, “ಪಹಲ್ಗಾಮ್ ಎಲ್ಲ ವರ್ಗದ ಪ್ರವಾಸಿಗರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಈ ಹಬ್ಬದ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವುದು ನಮ್ಮ ಗುರಿ” ಎಂದು ಹೇಳಿದರು.

ಹಬ್ಬದ ಸಂಕೇತಾತ್ಮಕ ಉದ್ಘಾಟನೆಯನ್ನು ಮುಂಬೈನ ಆರು ವರ್ಷದ ಬಾಲಕಿ ನೆರವೇರಿಸಿದ್ದು, ಪ್ರವಾಸೋದ್ಯಮವು ಎಲ್ಲಾ ವಯಸ್ಸಿನವರಿಗೂ ಸಂಬಂಧಿಸಿದ ಕ್ಷೇತ್ರ ಎಂಬ ಸಂದೇಶ ನೀಡಲಾಗಿದೆ. ಅಹಮದ್ ಅವರು ಸ್ಥಳೀಯ ನಿವಾಸಿಗಳು, ಹೊಟೇಲ್ ಸಿಬ್ಬಂದಿ, ಗೈಡ್‌ಗಳು ಮತ್ತು ಸೇವಾ ವಲಯದವರ ಪಾತ್ರವನ್ನು ಪ್ರಶಂಸಿಸಿದರು.

ಇದಲ್ಲದೆ, ಬೇಟಾಬ್ ವ್ಯಾಲಿಯಲ್ಲಿ ಹಿಮಾಧಾರಿತ ಸಾಹಸ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹೊಸ ಚಟುವಟಿಕೆಗಳನ್ನು ಪರಿಚಯಿಸುವ ಯೋಜನೆಯೂ ಹಬ್ಬದ ಭಾಗವಾಗಿದ್ದು, ಪ್ರವಾಸಿಗರಿಗೆ ನೂತನ ಮತ್ತು ಉತ್ತಮ ಅನುಭವವನ್ನು ಒದಗಿಸುವ ಗುರಿ ಹೊಂದಿದೆ.