ಪಾಟ್ನಾದಲ್ಲಿ ವಾಟರ್ ಮೆಟ್ರೋ ಸೇವೆ ಆರಂಭ
ವಾಟರ್ ಮೆಟ್ರೋ ಸೇವೆ ಪ್ರಾರಂಭದಲ್ಲಿ ದಿಘಾ ಘಾಟ್ – ಕಾಂಗನ್ ಘಾಟ್ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ದಿಘಾ ಪ್ರವಾಸಿ ಘಾಟ್, NIT ಘಾಟ್ ಮತ್ತು ಗಯಾ ಘಾಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಮಾರ್ಗವು ಪ್ರಯಾಣಿಕರು ನದಿತೀರದ ಸೌಂದರ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸುತ್ತದೆ.
ಪಾಟ್ನಾದ ಪ್ರವಾಸೋದ್ಯಮ ಮತ್ತು ನಗರ ಸಾರಿಗೆ ಅಭಿವೃದ್ಧಿಗಾಗಿ ಬಿಹಾರ ಪ್ರವಾಸೋದ್ಯಮ ಇಲಾಖೆ ಹಾಗೂ ಇನ್‌ಲ್ಯಾಂಡ್ ವಾಟರ್‌ವೇಸ್ ಅಥಾರಿಟಿ ಆಫ್ ಇಂಡಿಯಾ (IWAI) ಜತೆಗೂಡಿ ʼವಾಟರ್ ಮೆಟ್ರೋʼ ಸೇವೆಯನ್ನು ಪ್ರಾರಂಭಿಸಲು ಮುಂದಾಗಿವೆ. ಇತ್ತೀಚಿಗೆ ಗುಜರಾತ್ ನ ಭಾವ್ನಗರ್ ದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಪಾಟ್ನಾದಲ್ಲಿ ಆಧುನಿಕ ಹಾಗೂ ಪರಿಸರ ಸ್ನೇಹಿ ಜಲ ಸಾರಿಗೆ ವ್ಯವಸ್ಥೆಗೆ ದಾರಿ ತೆರೆದಂತಾಗಿದೆ.
ಆಧುನಿಕ ಹಡಗುಗಳು, ಪರಿಸರ ಸ್ನೇಹಿ ಪ್ರಯಾಣ
ಈ ಸೇವೆಗೆ ಹೈಬ್ರಿಡ್ ಎಲೆಕ್ಟ್ರಿಕ್ ಕ್ಯಾಟಮರಾನ್ ಹಡಗುಗಳನ್ನು ಬಳಸಲಾಗುತ್ತಿದೆ. ಬ್ಯಾಟರಿ ಮತ್ತು ಹೈಬ್ರಿಡ್ ಮೋಡ್‌ನಲ್ಲಿ ಓಡುವ ಈ ಹಡಗುಗಳು ಪರಿಸರ ಸ್ನೇಹಿಯಾಗಿದ್ದು ಕಾರ್ಬನ್ ಉತ್ಪಾದನೆ ಮಾಡುವುದಿಲ್ಲ. 100 ಪ್ರಯಾಣಿಕರನ್ನು (2 ವೀಲ್‌ಚೇರ್ ಬಳಕೆದಾರರನ್ನು ಸೇರಿ) ಸಾಗಿಸಬಲ್ಲ ಸಾಮರ್ಥ್ಯನ್ನು ಹೊಂದಿವೆ. ಸಂಪೂರ್ಣ ಏರ್‌ಕಂಡೀಷನ್ಡ್ ಸೌಲಭ್ಯಗಳು ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿವೆ.

908 ಕೋಟಿ ರು. ಮೌಲ್ಯದ ಈ ಯೋಜನೆಗೆ IWAI ಅಧ್ಯಕ್ಷ ಸುನಿಲ್ ಕುಮಾರ್ ಸಿಂಗ್ ಮತ್ತು ಬಿಹಾರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಂದ್ ಕಿಶೋರ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಹಾಗೂ ಮನ್ಸುಖ್ ಎಲ್. ಮಾಂಡವಿಯ ಕೂಡ ಉಪಸ್ಥಿತರಿದ್ದರು. ಈ ಯೋಜನೆ ಪಾಟ್ನಾದ ನಗರ ಸಾರಿಗೆಯನ್ನು ಹೆಚ್ಚು ಸುರಕ್ಷಿತ ಮತ್ತು ಸುಲಭಗೊಳಿಸುವುದರ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.
ವಾಟರ್ ಮೆಟ್ರೋ ಸೇವೆ ಪ್ರಾರಂಭದಲ್ಲಿ ದಿಘಾ ಘಾಟ್ – ಕಾಂಗನ್ ಘಾಟ್ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ದಿಘಾ ಪ್ರವಾಸಿ ಘಾಟ್, NIT ಘಾಟ್ ಮತ್ತು ಗಯಾ ಘಾಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಮಾರ್ಗವು ಪ್ರಯಾಣಿಕರು ನದಿತೀರದ ಸೌಂದರ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸುತ್ತದೆ. ಈ ಸೇವೆ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ಮಾಲಿನ್ಯವನ್ನು ತಗ್ಗಿಸಲು ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡುತ್ತದೆ.

ಶೀಘ್ರದಲ್ಲೇ ಪಾಟ್ನಾದಲ್ಲಿ ಪ್ರಯೋಗಾತ್ಮಕ ಸಂಚಾರ ನಡೆಯಲಿದ್ದು, ಬಳಿಕ ಅಧಿಕೃತ ಚಾಲನೆ ನೀಡಲಾಗುವುದು. ಮುಂದಿನ ಹಂತದಲ್ಲಿ ಹತ್ತು ಹೊಸ ಸ್ಥಳಗಳಿಗೆ ಈ ಸೇವೆ ವಿಸ್ತರಿಸುವ ಯೋಜನೆಯಿದೆ. ಇದರಿಂದ ಭಾರತದ ಪ್ರಮುಖ ಜಲ ಪ್ರವಾಸೋದ್ಯಮ ಕೇಂದ್ರವಾಗಿ ಪಾಟ್ನಾ ಹೊರಹೊಮ್ಮುವ ಸಾಧ್ಯತೆಯಿದೆ.
ಈ ಯೋಜನೆ ಸ್ಥಳೀಯ ಪ್ರವಾಸೋದ್ಯಮ, ಆತಿಥ್ಯ, ಚಿಲ್ಲರೆ ವ್ಯಾಪಾರ ಹಾಗೂ ಸಾರಿಗೆ ಕ್ಷೇತ್ರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಪಾಟ್ನಾದ ಅಭಿವೃದ್ಧಿಗೆ ದಾರಿತೆರೆದು, ಜನರಿಗೆ ಸುರಕ್ಷಿತ ಮತ್ತು ಸುಗಮ ಸಾರಿಗೆಯನ್ನು ಒದಗಿಸುವುದರ ಜತೆಗೆ, ನಗರದ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿದೆ.