ಪಾಟ್ನಾದ ಪ್ರವಾಸೋದ್ಯಮ ಮತ್ತು ನಗರ ಸಾರಿಗೆ ಅಭಿವೃದ್ಧಿಗಾಗಿ ಬಿಹಾರ ಪ್ರವಾಸೋದ್ಯಮ ಇಲಾಖೆ ಹಾಗೂ ಇನ್‌ಲ್ಯಾಂಡ್ ವಾಟರ್‌ವೇಸ್ ಅಥಾರಿಟಿ ಆಫ್ ಇಂಡಿಯಾ (IWAI) ಜತೆಗೂಡಿ ʼವಾಟರ್ ಮೆಟ್ರೋʼ ಸೇವೆಯನ್ನು ಪ್ರಾರಂಭಿಸಲು ಮುಂದಾಗಿವೆ. ಇತ್ತೀಚಿಗೆ ಗುಜರಾತ್ ನ ಭಾವ್ನಗರ್ ದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಪಾಟ್ನಾದಲ್ಲಿ ಆಧುನಿಕ ಹಾಗೂ ಪರಿಸರ ಸ್ನೇಹಿ ಜಲ ಸಾರಿಗೆ ವ್ಯವಸ್ಥೆಗೆ ದಾರಿ ತೆರೆದಂತಾಗಿದೆ.

ಆಧುನಿಕ ಹಡಗುಗಳು, ಪರಿಸರ ಸ್ನೇಹಿ ಪ್ರಯಾಣ

ಈ ಸೇವೆಗೆ ಹೈಬ್ರಿಡ್ ಎಲೆಕ್ಟ್ರಿಕ್ ಕ್ಯಾಟಮರಾನ್ ಹಡಗುಗಳನ್ನು ಬಳಸಲಾಗುತ್ತಿದೆ. ಬ್ಯಾಟರಿ ಮತ್ತು ಹೈಬ್ರಿಡ್ ಮೋಡ್‌ನಲ್ಲಿ ಓಡುವ ಈ ಹಡಗುಗಳು ಪರಿಸರ ಸ್ನೇಹಿಯಾಗಿದ್ದು ಕಾರ್ಬನ್‌ ಉತ್ಪಾದನೆ ಮಾಡುವುದಿಲ್ಲ. 100 ಪ್ರಯಾಣಿಕರನ್ನು (2 ವೀಲ್‌ಚೇರ್ ಬಳಕೆದಾರರನ್ನು ಸೇರಿ) ಸಾಗಿಸಬಲ್ಲ ಸಾಮರ್ಥ್ಯನ್ನು ಹೊಂದಿವೆ. ಸಂಪೂರ್ಣ ಏರ್‌ಕಂಡೀಷನ್ಡ್ ಸೌಲಭ್ಯಗಳು ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿವೆ.

metro

908 ಕೋಟಿ ರು. ಮೌಲ್ಯದ ಈ ಯೋಜನೆಗೆ IWAI ಅಧ್ಯಕ್ಷ ಸುನಿಲ್ ಕುಮಾರ್ ಸಿಂಗ್ ಮತ್ತು ಬಿಹಾರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಂದ್ ಕಿಶೋರ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಹಾಗೂ ಮನ್ಸುಖ್ ಎಲ್. ಮಾಂಡವಿಯ ಕೂಡ ಉಪಸ್ಥಿತರಿದ್ದರು. ಈ ಯೋಜನೆ ಪಾಟ್ನಾದ ನಗರ ಸಾರಿಗೆಯನ್ನು ಹೆಚ್ಚು ಸುರಕ್ಷಿತ ಮತ್ತು ಸುಲಭಗೊಳಿಸುವುದರ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

ವಾಟರ್ ಮೆಟ್ರೋ ಸೇವೆ ಪ್ರಾರಂಭದಲ್ಲಿ ದಿಘಾ ಘಾಟ್ – ಕಾಂಗನ್ ಘಾಟ್ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ದಿಘಾ ಪ್ರವಾಸಿ ಘಾಟ್, NIT ಘಾಟ್ ಮತ್ತು ಗಯಾ ಘಾಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಮಾರ್ಗವು ಪ್ರಯಾಣಿಕರು ನದಿತೀರದ ಸೌಂದರ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸುತ್ತದೆ. ಈ ಸೇವೆ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ಮಾಲಿನ್ಯವನ್ನು ತಗ್ಗಿಸಲು ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡುತ್ತದೆ.

city

ಶೀಘ್ರದಲ್ಲೇ ಪಾಟ್ನಾದಲ್ಲಿ ಪ್ರಯೋಗಾತ್ಮಕ ಸಂಚಾರ ನಡೆಯಲಿದ್ದು, ಬಳಿಕ ಅಧಿಕೃತ ಚಾಲನೆ ನೀಡಲಾಗುವುದು. ಮುಂದಿನ ಹಂತದಲ್ಲಿ ಹತ್ತು ಹೊಸ ಸ್ಥಳಗಳಿಗೆ ಈ ಸೇವೆ ವಿಸ್ತರಿಸುವ ಯೋಜನೆಯಿದೆ. ಇದರಿಂದ ಭಾರತದ ಪ್ರಮುಖ ಜಲ ಪ್ರವಾಸೋದ್ಯಮ ಕೇಂದ್ರವಾಗಿ ಪಾಟ್ನಾ ಹೊರಹೊಮ್ಮುವ ಸಾಧ್ಯತೆಯಿದೆ.

ಈ ಯೋಜನೆ ಸ್ಥಳೀಯ ಪ್ರವಾಸೋದ್ಯಮ, ಆತಿಥ್ಯ, ಚಿಲ್ಲರೆ ವ್ಯಾಪಾರ ಹಾಗೂ ಸಾರಿಗೆ ಕ್ಷೇತ್ರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಪಾಟ್ನಾದ ಅಭಿವೃದ್ಧಿಗೆ ದಾರಿತೆರೆದು, ಜನರಿಗೆ ಸುರಕ್ಷಿತ ಮತ್ತು ಸುಗಮ ಸಾರಿಗೆಯನ್ನು ಒದಗಿಸುವುದರ ಜತೆಗೆ, ನಗರದ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿದೆ.