ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿಮರಿಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಮುಕ್ತಗೊಳಿಸಲಾಗಿದ್ದು, ದತ್ತು ಸ್ವೀಕರಿಸುವ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧಿಕೃತವಾಗಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ವನ್ಯಜೀವಿ ಸಂರಕ್ಷಣೆ ಮಹತ್ವದ ಬಗ್ಗೆ ಮಾತನಾಡುತ್ತಾ ಅವರು, ಹುಲಿಗಳಂಥ ಅಪರೂಪದ ಪ್ರಾಣಿಗಳ ರಕ್ಷಣೆ ಹಾಗೂ ಅವುಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಇಂದಿನ ದಿನಗಳಲ್ಲಿ ಕಾಡಿನಲ್ಲಿ ಹುಲಿಯನ್ನು ಕಾಣುವುದು ಅಪರೂಪವಾಗುತ್ತಿದ್ದು, ಸಂರಕ್ಷಣಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಸುಮಾರು ಒಂದು ವರ್ಷದ ಹುಲಿಮರಿಯನ್ನು ದತ್ತು ಸ್ವೀಕಾರ ಯೋಜನೆಯಡಿ ಪ್ರಾಯೋಜಕರಿಗೆ ಹಸ್ತಾಂತರಿಸಲಾಯಿತು. ಈ ಯೋಜನೆಯ ಮೂಲಕ ವನ್ಯಜೀವಿ ಸಂರಕ್ಷಣೆಗೆ ಅಗತ್ಯವಿರುವ ಆರ್ಥಿಕ ಬೆಂಬಲವನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಕಾರ್ಯಕ್ರಮದಲ್ಲಿ ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ದಿವಾಕರ್ ಕದ್ರಿ ಸೇರಿದಂತೆ ಉದ್ಯಾನವನದ ಅಧಿಕಾರಿಗಳು, ಪರಿಸರ ಕಾರ್ಯಕರ್ತರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ವನ್ಯಜೀವಿ ಸಂರಕ್ಷಣೆಯಲ್ಲಿ ಸಂವೇದನಾಶೀಲತೆ ಜತೆಗೆ ವ್ಯವಸ್ಥಿತ ಕ್ರಮಗಳ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಈ ದತ್ತು ಸ್ವೀಕಾರ ಕಾರ್ಯಕ್ರಮವು ಹುಲಿಗಳ ಸಂರಕ್ಷಣೆಗೆ ಹೊಸ ಆಯಾಮ ನೀಡುವುದರೊಂದಿಗೆ, ಸಾರ್ವಜನಿಕರಲ್ಲಿ ವನ್ಯಜೀವಿ ಜಾಗೃತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.