ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 28ರಂದು ಕರ್ನಾಟಕದ ಕಾರವಾರದಲ್ಲಿರುವ ಪ್ರಮುಖ ನೌಕಾನೆಲೆ ‘ಪ್ರಾಜೆಕ್ಟ್ ಸೀಬರ್ಡ್’ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತೀಯ ನೌಕಾಪಡೆಯ ವಿವಿಧ ಕಾರ್ಯಚಟುವಟಿಕೆಗಳನ್ನು ವೀಕ್ಷಿಸುವ ಜತೆಗೆ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್ ಹಾಗೂ ಜಲಾಂತರ್ಗಾಮಿ ನೌಕೆಯನ್ನು ಪರಿಶೀಲಿಸಲಿದ್ದಾರೆ.

ಭೇಟಿಯ ಸಮಯದಲ್ಲಿ ರಾಷ್ಟ್ರಪತಿ ಅವರು ಜಲಾಂತರ್ಗಾಮಿ ನೌಕೆಯಲ್ಲಿ ಸ್ವಲ್ಪ ಕಾಲ ಸಮುದ್ರದ ಒಳಭಾಗದಲ್ಲಿ ಸಂಚರಿಸುವ ಸಾಧ್ಯತೆ ಇದ್ದು, ನೌಕಾಪಡೆಯ ತಾಂತ್ರಿಕ ಸಾಮರ್ಥ್ಯ ಮತ್ತು ರಕ್ಷಣಾ ಸಿದ್ಧತೆಯನ್ನು ನೇರವಾಗಿ ಅವಲೋಕಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

476381072_612270308249263_5843170352659839901_n

ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 28ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 3.30ರವರೆಗೆ ಕಾರವಾರ–ಅಂಕೋಲಾ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಮಜಳಿಯಿಂದ ಹಾರಾವಾಡದವರೆಗೆ ಯಾವುದೇ ಮೀನುಗಾರಿಕಾ ಬೋಟುಗಳು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಕಾರವಾರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸ್ಥಳೀಯ ಆಡಳಿತ ಹಾಗೂ ನೌಕಾಪಡೆ ಅಧಿಕಾರಿಗಳು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.