ರೈಲ್ವೆ ಕಂಟೋನ್ಮೆಂಟ್ ಕಾಲೊನಿ ವೃಕ್ಷ ಪ್ರದೇಶ ಈಗ ಜೀವವೈವಿಧ್ಯ ಪಾರಂಪರಿಕ ತಾಣ !
ರೈಲ್ವೆ ಕಂಟೋನ್ಮೆಂಟ್ ಕಾಲೊನಿಯ 8.61 ಎಕರೆ ಪ್ರದೇಶವನ್ನು 'ಜೀವವೈವಿಧ್ಯ ಪಾರಂಪರಿಕ ತಾಣ'ವೆಂದು ರಾಜ್ಯ ಸರಕಾರ ಘೋಷಿಸಿದೆ.
ಬೆಂಗಳೂರಿನ ನಗರದ ಹೃದಯಭಾಗದ ರೈಲ್ವೆ ಕಂಟೋನ್ಮೆಂಟ್ ಕಾಲೊನಿಯ 8.61 ಎಕರೆ ಪ್ರದೇಶವನ್ನು 'ಜೀವವೈವಿಧ್ಯ ಪಾರಂಪರಿಕ ತಾಣ'ವೆಂದು ರಾಜ್ಯ ಸರಕಾರವು ಘೋಷಿಸಿದೆ. 371 ಮರಗಳನ್ನು ಹೊಂದಿರುವ ಈ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳಿಂದ ರಕ್ಷಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪರಿಸರವಾದಿಗಳು ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿದ್ದು, ಇದು ನಗರದ ಎರಡನೇ ಪಾರಂಪರಿಕ ತಾಣವಾಗಿದೆ.
ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ (ಆರ್‌ಎಲ್‌ಡಿಎ) ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಹಯೋಗದಲ್ಲಿ ಈ ಸ್ಥಳವನ್ನು ವಾಣಿಜ್ಯಾತ್ಮಕ ಪ್ರದೇಶವನ್ನಾಗಿಸಲು ಯೋಜನೆ ರೂಪಿಸಿತ್ತು. ಇದಕ್ಕೆ ಪರಿಸರವಾದಿಗಳು, ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ 'ಪರಿಸರಕ್ಕಾಗಿ ನಾವು' ಸಂಘಟನೆ ನಿರಂತರ ಹೋರಾಟ ನಡೆಸಿತ್ತು. ಪರಿಣಾಮವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜೀವವೈವಿಧ್ಯ ಪಾರಂಪರಿಕ ತಾಣವೆಂದು ಘೋಷಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.