ಸೌದಿ : ಟ್ರಾವೆಲ್ ಪ್ಯಾಕೇಜ್‌ನಲ್ಲೇ ವೀಸಾ, ಪ್ರವಾಸಿಗರಿಗೆ 'ಪ್ಯಾಕೇಜ್ ವೀಸಾ' ಸೌಲಭ್ಯ
ಹೊಸ 'ಪ್ಯಾಕೇಜ್ ವೀಸಾ' ವ್ಯವಸ್ಥೆಯ ವಿಶೇಷತೆ ಎಂದರೆ, ಪ್ರವಾಸ ಯೋಜನೆಯ ಸಂಪೂರ್ಣ ಪ್ರಕ್ರಿಯೆಯನ್ನು ಒಂದೇ ವೇದಿಕೆಯಲ್ಲಿ ಪೂರ್ಣಗೊಳಿಸಬಹುದಾಗಿದ್ದು, ಅರ್ಹ ಪ್ರವಾಸಿಗರು ವಿಮಾನ ಟಿಕೆಟ್, ವಸತಿ ಬುಕ್ಕಿಂಗ್ ಹಾಗೂ ವೀಸಾ ಪ್ರಕ್ರಿಯೆಯನ್ನು ಒಂದೇ ಬುಕ್ಕಿಂಗ್ ಮೂಲಕ ಮುಗಿಸಬಹುದಾಗಿದೆ.
ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಇನ್ನಷ್ಟು ಸುಲಭ, ವೇಗದ ಹಾಗೂ ತೊಂದರೆರಹಿತ ಪ್ರಯಾಣ ಅನುಭವ ಕಲ್ಪಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಹೊಸ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಟ್ರಾವೆಲ್ ಪ್ಯಾಕೇಜ್ ಬುಕಿಂಗ್‌ನೊಂದಿಗೆ ಪ್ರವಾಸಿ ವೀಸಾ ಪ್ರಕ್ರಿಯೆಯನ್ನೇ ಸಂಯೋಜಿಸುವ 'ಪ್ಯಾಕೇಜ್ ವೀಸಾ' (Package Visa) ಯೋಜನೆಯನ್ನು ಪರಿಚಯಿಸಿದೆ. ಸೌದಿ ಅರೇಬಿಯಾದ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿರುವ ಈ ಯೋಜನೆಯು ಪ್ರವಾಸಿಗರ ಅನುಭವವನ್ನು ಮತ್ತಷ್ಟು ಸುಧಾರಿಸುವ ಗುರಿಯನ್ನು ಹೊಂದಿದೆ.

ಸೌದಿ ಅರೇಬಿಯಾ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದ್ದು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 'ಪ್ಯಾಕೇಜ್ ವೀಸಾ' ಯೋಜನೆಯನ್ನು ಪರಿಚಯಿಸಿದೆ. ಇದು ಈಗಾಗಲೇ ಜಾರಿಯಲ್ಲಿರುವ ಪ್ರವಾಸಿ ಸ್ನೇಹಿ ವೀಸಾ ವ್ಯವಸ್ಥೆಗಳಿಗೆ ಹೊಸ ಸೇರ್ಪಡೆಯಾಗಿದೆ.
ಈ ಮೊದಲು ಪ್ರವಾಸಿಗರಿಗಾಗಿ ಇ-ವೀಸಾ (Tourist e-Visa), ವೀಸಾ ಆನ್ ಅರೈವಲ್ (Visa on Arrival) ಹಾಗೂ ಸ್ಟಾಪ್‌ಓವರ್ ಟ್ರಾನ್ಸಿಟ್ ವೀಸಾ (Stopover Transit Visa) ಸೌಲಭ್ಯಗಳನ್ನು ಸೌದಿ ಅರೇಬಿಯಾ ಜಾರಿಗೆ ತಂದಿತ್ತು. ಈ ಕ್ರಮಗಳಿಂದ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ದೇಶ ಪ್ರವೇಶ ಇನ್ನಷ್ಟು ಸುಲಭವಾಗಿದೆ.
ಈ ಪ್ರಯತ್ನಗಳ ಫಲವಾಗಿ 2025ರಲ್ಲಿ ಸೌದಿ ಅರೇಬಿಯಾ 2.9 ಕೋಟಿ (29 ಮಿಲಿಯನ್)ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿದ್ದು, ಮಧ್ಯಪ್ರಾಚ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರವಾಸಿ ತಾಣಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ.
ಹೊಸ 'ಪ್ಯಾಕೇಜ್ ವೀಸಾ' ವ್ಯವಸ್ಥೆಯ ವಿಶೇಷತೆ ಎಂದರೆ, ಪ್ರವಾಸ ಯೋಜನೆಯ ಸಂಪೂರ್ಣ ಪ್ರಕ್ರಿಯೆಯನ್ನು ಒಂದೇ ವೇದಿಕೆಯಲ್ಲಿ ಪೂರ್ಣಗೊಳಿಸಬಹುದಾಗಿದ್ದು, ಅರ್ಹ ಪ್ರವಾಸಿಗರು ವಿಮಾನ ಟಿಕೆಟ್, ವಸತಿ ಬುಕ್ಕಿಂಗ್ ಹಾಗೂ ವೀಸಾ ಪ್ರಕ್ರಿಯೆಯನ್ನು ಒಂದೇ ಬುಕ್ಕಿಂಗ್ ಮೂಲಕ ಮುಗಿಸಬಹುದಾಗಿದೆ.
ಇದರ ಜತೆಗೆ ಪ್ರವಾಸದ ವೇಳೆಯಲ್ಲಿ ಭೇಟಿ ನೀಡಬಹುದಾದ ಕಾರ್ಯಕ್ರಮಗಳು, ಪ್ರಮುಖ ಪ್ರವಾಸಿ ಆಕರ್ಷಣೆಗಳು ಹಾಗೂ ವಿಶೇಷ ಪ್ರವಾಸ ಅನುಭವಗಳನ್ನೂ (Curated Tourism Experiences) ತಮ್ಮ ಪ್ರವಾಸ ಯೋಜನೆಗೆ ಸೇರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಈ ಸಮಗ್ರ ಡಿಜಿಟಲ್ ವ್ಯವಸ್ಥೆಯಿಂದ ಆಡಳಿತಾತ್ಮಕ ಪ್ರಕ್ರಿಯೆಗಳು ಸರಳವಾಗಲಿದ್ದು, ಪ್ರಯಾಣ ಯೋಜನೆಗೆ ಬೇಕಾಗುವ ಸಮಯ ಕಡಿಮೆಯಾಗುತ್ತದೆ. ಬುಕ್ಕಿಂಗ್‌ನಿಂದ ಸೌದಿ ಅರೇಬಿಯಾಗೆ ತಲುಪುವವರೆಗಿನ ಸಂಪೂರ್ಣ ಪ್ರಯಾಣವನ್ನು ಸುಗಮ ಹಾಗೂ ತೊಂದರೆರಹಿತವಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪ್ರವಾಸ ಸಂಸ್ಥೆಗಳಿಗೂ ಲಾಭ
'ಪ್ಯಾಕೇಜ್ ವೀಸಾ' ಯೋಜನೆಯು ಟ್ರಾವೆಲ್ ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೂ ಹೊಸ ಅವಕಾಶಗಳನ್ನು ಕಲ್ಪಿಸಲಿದೆ. ವಿಮಾನ, ವಸತಿ, ವೀಸಾ, ಪ್ರವಾಸಿ ತಾಣಗಳ ಭೇಟಿ ಹಾಗೂ ವಿಶೇಷ ಅನುಭವಗಳನ್ನು ಒಳಗೊಂಡ ಸಮಗ್ರ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲು ಅವಕಾಶ ಸಿಗಲಿದೆ. ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜತೆಗೆ, ಅವರು ಸೌದಿ ಅರೇಬಿಯಾದ ವಿವಿಧ ತಾಣಗಳಲ್ಲಿ ಹೆಚ್ಚು ದಿನ ಉಳಿದು ಹೆಚ್ಚಿನ ಸ್ಥಳಗಳನ್ನು ಅನ್ವೇಷಿಸಲು ಉತ್ತೇಜನ ದೊರೆಯಲಿದೆ.
ಈ ಯೋಜನೆಯು ವೀಸಾ ಸೇವೆಗಳು, ಟ್ರಾವೆಲ್, ಆತಿಥ್ಯ ವಲಯ ಹಾಗೂ ಪ್ರವಾಸಿ ತಾಣಗಳನ್ನು ಒಂದೇ ಡಿಜಿಟಲ್ ಚೌಕಟ್ಟಿನಲ್ಲಿ ಸಂಪರ್ಕಿಸುವ ಮೂಲಕ ಪ್ರವಾಸೋದ್ಯಮ ಪರಿಸರ ವ್ಯವಸ್ಥೆಯ ವಿವಿಧ ಪಾಲುದಾರರ ನಡುವಿನ ಸಹಕಾರವನ್ನೂ ಬಲಪಡಿಸಲಿದೆ.
ಸಚಿವರ ಮಾತು

ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವ ಅಹ್ಮದ್ ಅಲ್ ಖತೀಬ್ ಮಾತನಾಡಿ, "ಪ್ರಯಾಣ ಬುಕ್ಕಿಂಗ್‌ನೊಂದಿಗೆ ವೀಸಾ ಪ್ರಕ್ರಿಯೆಯನ್ನು ಸಂಯೋಜಿಸುವ ಮೂಲಕ ಪ್ರವಾಸಿಗರ ಸಂಪೂರ್ಣ ಪ್ರಯಾಣವನ್ನು ಸರಳಗೊಳಿಸುತ್ತಿದ್ದೇವೆ. 'ಪ್ಯಾಕೇಜ್ ವೀಸಾ' ಸೌದಿ ಅರೇಬಿಯಾವನ್ನು ಜಾಗತಿಕವಾಗಿ ಇನ್ನಷ್ಟು ಸುಲಭವಾಗಿ ತಲುಪಬಹುದಾದ ಪ್ರವಾಸಿ ತಾಣವನ್ನಾಗಿ ರೂಪಿಸುವ ಮಹತ್ವದ ಹೆಜ್ಜೆಯಾಗಿದೆ " ಎಂದು ಹೇಳಿದ್ದಾರೆ.
ಗುಣಮಟ್ಟಕ್ಕೆ ಆದ್ಯತೆ
ಸೇವೆಯ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಈ ಸೌಲಭ್ಯವನ್ನು ನಿಗದಿತ ಸೇವಾ ಮಾನದಂಡಗಳನ್ನು ಪೂರೈಸುವ ಹಾಗೂ 24×7 ಗ್ರಾಹಕ ಸಹಾಯ ಸೇವೆ ಒದಗಿಸುವ ಅರ್ಹ ಟ್ರಾವೆಲ್ ಮತ್ತು ಪ್ರವಾಸೋದ್ಯಮ ಸಂಸ್ಥೆಗಳ ಮೂಲಕ ಮಾತ್ರ ನೀಡಲಾಗುವುದು.
ಡಿಜಿಟಲ್ ಪ್ರವಾಸೋದ್ಯಮದತ್ತ ಮತ್ತೊಂದು ಹೆಜ್ಜೆ
ಪ್ರಯಾಣದ ಅಡೆತಡೆಗಳನ್ನು ನಿವಾರಿಸುವುದು, ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹಾಗೂ ವಿಶ್ವಮಟ್ಟದ ಪ್ರವಾಸಿ ಅನುಭವವನ್ನು ಒದಗಿಸುವುದು ಸೌದಿ ಅರೇಬಿಯಾದ ಗುರಿಯಾಗಿದೆ. 'ಪ್ಯಾಕೇಜ್ ವೀಸಾ' ಯೋಜನೆಯು ಜಾಗತಿಕವಾಗಿ ಸಂಪರ್ಕ ಹೊಂದಿರುವ, ಸುಲಭವಾಗಿ ಪ್ರವೇಶಿಸಬಹುದಾದ ಹಾಗೂ ಸ್ಪರ್ಧಾತ್ಮಕ ಪ್ರವಾಸಿ ತಾಣವಾಗಿ ಸೌದಿ ಅರೇಬಿಯಾವನ್ನು ರೂಪಿಸುವ ಪ್ರಯತ್ನಕ್ಕೆ ಮತ್ತಷ್ಟು ಬಲ ತುಂಬಲಿದೆ.