ಕರ್ನಾಟಕದ ಅತಿದೊಡ್ಡ ಜಾತ್ರೆಯೆಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ನಿಗದಿಯಾಗಿದೆ.

ಮಾರಿಕಾಂಬಾ ದೇವಾಲಯದ ಸಭಾ ಮಂಟಪದಲ್ಲಿ ಜಾತ್ರೆ ಪೂರ್ವಭಾವಿ ಸಭೆ ನಡೆಯಿತು. ನಂತರ ಜಾತ್ರಾ ಮೂಹೂರ್ತ, ಮರುಪ್ರತಿಷ್ಟಾವಿಧಿ ಚಾಲನೆ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಶಾಸಕ ಬೀಮಣ್ಣ ನಾಯ್ಕ್, ಎಸಿ ಕಾವ್ಯಾರಾಣಿ, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ಡಿವೈಎಸ್‌ಪಿ ಶ್ರೀಮತಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಮಾರಿಕಾಂಬಾ ದೇಗುಲದ ಅಧ್ಯಕ್ಷ ಆರ್. ಜಿ. ನಾಯ್ಕ್, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಜಗದೀಶ ಗೌಡ, ಹಾಗೂ ಧರ್ಮದರ್ಶಿಗಳು, ಬಾಬದಾರರು, ಸಾರ್ವಜನಿಕರು ಉಪಸ್ಥಿತರಿದ್ದರು.

ಫೆ. 25ರಂದು ರಥೋತ್ಸವ ಜರುಗಲಿದ್ದು, ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿ ಪ್ರತಿಷ್ಠಾಪನೆ ನೆರವೇರಲಿದೆ. ಫೆ. 26ರಂದು ದೇವಿ ದರ್ಶನ ಮತ್ತು ಪೂಜಾ ಸೇವೆ, ಹರಕೆಗಳ ಸಮರ್ಪಣೆ ಪ್ರಾರಂಭವಾಗಲಿದೆ ಎಂದು ಪ್ರಕಟಿಸಲಾಯಿತು. ಇದೇ ಸಂದರ್ಭದಲ್ಲಿ ಮಾರಿಕಾಂಬಾ ಸಭಾಮಂಟಪದಲ್ಲಿ ಜಾತ್ರಾ ಮಹೋತ್ಸವ ನಿಶ್ಚಯ ಸಂಕೇತವಾಗಿ ದೀಪ ಬೆಳಗಲಾಯಿತು.