ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಮಕ್ಕಳಿಗಾಗಿ ವಿಶೇಷ ಟ್ರಾಲಿ
ಮಕ್ಕಳ ಜತೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನೀವು ಪ್ರಯಾಣ ಬೆಳೆಸುವವರಿದ್ದರೆ ಇನ್ನು ಚಿಂತೆ ಮುಕ್ತ ಪ್ರಯಾಣ ನಿಮ್ಮದಾಗಲಿದೆ. ಪ್ರಯಾಣಿಕರಿಗೆ ಸುಗಮ ಪ್ರಯಾಣ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 01 ಮತ್ತು 02 ರಲ್ಲಿ ಪ್ರಯಾಣಿಕರಿಗೆ ನೂತನ ಟ್ರಾಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದೇವನಹಳ್ಳಿ: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Bengaluru) ಪ್ರಯಾಣಿಕರ ನೆಚ್ಚಿನ ಏರ್‌ಪೋರ್ಟ್. ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಸೇವೆಗಳನ್ನು ನೀಡುತ್ತಲೇ ಬಂದಿರುವ ಈ ಏರ್‌ಪೋರ್ಟ್, ಮಕ್ಕಳ ಜೊತೆ ಬರುವ ಪ್ರಯಾಣಿಕರು ಮತ್ತು ಮಹಿಳೆಯರ ಹಿತಕರ ಪ್ರಯಾಣಕ್ಕಾಗಿ ಇತ್ತೀಚೆಗಷ್ಟೇ ನೂತನ ಟ್ರಾಲಿ ವ್ಯವಸ್ಥೆ (trolley system) ಕಲ್ಪಿಸಿದೆ.
ವಿಶೇಷವಾಗಿದೆ ಟ್ರಾಲಿ ವ್ಯವಸ್ಥೆ
ನಿತ್ಯ ಲಕ್ಷಾಂತರ ಜನರು ಬಂದು ಹೋಗುವ ಕೆಂಪೇಗೌಡ ವಿಮಾಣ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಬರುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಅಂಥವರಿಗೆ ಮಕ್ಕಳ ಜತೆಗೆ ಲಗೇಜ್ ಕೊಂಡೊಯ್ಯುವುದು ಕಷ್ಟಕರ ವಿಷಯವಾಗಿಬಿಡುತ್ತದೆ. ಈ ನಿಟ್ಟಿನಲ್ಲಿ ಏರ್‌ಪೋರ್ಟ್ ಆಡಳಿತ ಮಂಡಳಿ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಏರ್ಪೋರ್ಟ್ನ ಟರ್ಮಿನಲ್ 01 ಮತ್ತು 02 ರಲ್ಲಿ ಕೆಐಎಬಿ ಬೇಬಿ ಕ್ಯಾರಿಯರ್ ಮತ್ತು ಹ್ಯಾಂಡ್ ಬ್ಯಾಗ್ ಟ್ರಾಲಿ ಸೇವೆಯನ್ನು ಆರಂಭಿಸಿದೆ. ಇದರಲ್ಲಿ 2 ತಿಂಗಳಿನಿಂದ 4 ವರ್ಷದವರೆಗಿನ ಮಕ್ಕಳನ್ನ ಕೂರಿಸಿಕೊಂಡು ಹೋಗಬಹುದಾಗಿದ್ದು, ಮಕ್ಕಳೊಂದಿಗೆ ಪ್ರಯಾಣ ಮಾಡುವ ಹೆತ್ತವರಿಗಿದು ನೆರವಾಗಲಿದೆ.