ತೆಲಂಗಾಣ ಪ್ರವಾಸೋದ್ಯಮ ಇಲಾಖೆ ನಾಗಾರ್ಜುನಸಾಗರ ಮತ್ತು ಶ್ರೀಶೈಲಂ ನಡುವೆ ಹೊಸದಾಗಿ ಕ್ರೂಸ್ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ನದಿ ತೀರಗಳ ಸುಂದರ ಪ್ರಕೃತಿ, ನಲ್ಲಮಲಾ ಅರಣ್ಯದ ನಿಗೂಢ ಸೌಂದರ್ಯ ಮತ್ತು ಪವಿತ್ರ ಶ್ರೀಶೈಲಂ ಕ್ಷೇತ್ರದ ಧಾರ್ಮಿಕ ಮಹತ್ವ, ಈ ಎಲ್ಲವನ್ನೂ ಒಂದೇ ಪಯಣದಲ್ಲಿ ಅನುಭವಿಸುವ ಅವಕಾಶವನ್ನು ಈ ಸೇವೆ ಒದಗಿಸುತ್ತದೆ.

ಈ ಹೊಸ ಕ್ರೂಸ್ ಸೇವೆಯು ಸುಮಾರು 120 ಕಿಮೀ ವ್ಯಾಪ್ತಿ ಹೊಂದಿದ್ದು, ನಾಗಾರ್ಜುನಸಾಗರ ಜಲಾಶಯದಿಂದ ಆರಂಭವಾಗಿ ನದಿ ತೀರದ ನೈಸರ್ಗಿಕ ಸೌಂದರ್ಯವನ್ನು ಪ್ರವಾಸಿಗರಿಗೆ ಪರಿಚಯಿಸುತ್ತಾ ಸಾಗುತ್ತದೆ. ಮಾರ್ಗ ಮಧ್ಯದಲ್ಲಿ ಪ್ರವಾಸಿಗರು ಕಾಡಿನ ಹಸಿರು ಜಗತ್ತಿನ, ಕಲ್ಲಿನ ಗುಡ್ಡಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಪ್ರಯಾಣದ ಅಂತ್ಯದಲ್ಲಿ ಪ್ರವಾಸಿಗರು ಇಗಲಪಂತೆ ತಲುಪಿ ಅಲ್ಲಿಂದ ವಿಶೇಷ ಸಾರಿಗೆಯ ಮೂಲಕ ಪ್ರಸಿದ್ಧ ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಬಹುದು.

Telangana cruise service


ಪ್ರವಾಸೋದ್ಯಮ ಇಲಾಖೆ ತಿಳಿಸಿರುವಂತೆ, ವಾರಾಂತ್ಯಗಳಲ್ಲಿ ದೊರಕುವ ಈ ಕ್ರೂಸ್ ಸೇವೆ ಕುಟುಂಬಗಳು, ಪ್ರವಾಸ ಪ್ರಿಯರು ಮತ್ತು ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಹೊಸ ಅನುಭವವನ್ನು ನೀಡಲಿದೆ. ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದ ಕಾಟಮರಾನ್ ನೌಕೆಯಲ್ಲಿ ಆರಾಮದಾಯಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ, ಪ್ರವಾಸಿಗರ ವೀಕ್ಷಣೆಗೆ ಅನುಕೂಲವಾಗಲೆಂದು ಮೇಲ್ದರ್ಜೆಯ ಡೆಕ್‌ಗಳನ್ನೂ ಅಳವಡಿಸಲಾಗಿದೆ. ಮಾರ್ಗದರ್ಶನಕ್ಕಾಗಿ ಸಿಬ್ಬಂದಿಯೂ ಕ್ರೂಸ್‌ನಲ್ಲಿ ಇರಲಿದ್ದಾರೆ.

ಈ ಸೇವೆಯು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ಪ್ರವಾಸಿಗರಿಗೆ ಯುನಿಕ್‌ ಅನುಭವವನ್ನು ನೀಡುತ್ತದೆ ಎಂದು ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.