ನಾಗೋಯಾ ನಗರದ ಐಚಿ ಸ್ಕೈ ಎಕ್ಸ್‌ಪೊನಲ್ಲಿ ಆಯೋಜನೆಯಾದ ಪ್ರತಿಷ್ಠಿತ ಜಪಾನ್‌ ಅಸೋಸಿಯೇಶನ್‌ ಆಫ್‌ ಟ್ರಾವೆಲ್‌ ಏಜೆಂಟ್ಸ್ (JATA) 2025 ಪ್ರವಾಸೋದ್ಯಮ ಮೇಳದಲ್ಲಿ ತೆಲಂಗಾಣ ಪ್ರವಾಸೋದ್ಯಮವು ಮೊದಲ ಬಾರಿಗೆ ಭಾಗವಿಸಿದೆ.

ತೆಲಂಗಾಣದ ಪೆವಿಲಿಯನ್‌ ಅನ್ನು ಟೋಕಿಯೋದಲ್ಲಿರುವ ಭಾರತದ ರಾಯಭಾರ ಕಚೇರಿಯ ಆರ್ಥಿಕ ಹಾಗೂ ವಾಣಿಜ್ಯ ಸಚಿವರಾದ ದೇಬ್ಜಾನಿ ಚಕ್ರವರ್ತಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತೆಲಂಗಾಣ ಪ್ರವಾಸೋದ್ಯಮಾಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಬೆಂದಲ ಮಹೇಶ್ ಕುಮಾರ್ ಹಾಗೂ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಯೂನಿಟ್ ಸಲಹೆಗಾರ ಕವಲಿ ಚಂದ್ರಕಾಂತ್ ಉಪಸ್ಥಿತರಿದ್ದರು.

telangana


‘ತೆಲಂಗಾಣ ಜರೂರ ಆನಾ’ (ತೆಲಂಗಾಣಕ್ಕೆ ತಪ್ಪದೆ ಬನ್ನಿ) ಎಂಬ ಟ್ಯಾಗ್‌ಲೈನ್‌ ಅಡಿ ರೂಪುಗೊಂಡ ಪೆವಿಲಿಯನ್, ವಿದೇಶಿ ಪ್ರವಾಸಿಗರು, ಪ್ರವಾಸೋದ್ಯಮ ಕ್ಷೇತ್ರದ ತಜ್ಞರು ಮತ್ತು ಮಾಧ್ಯಮದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಈ ಅಂಕಣದ ಪ್ರಮುಖ ಆಕರ್ಷಣೆಯಾಗಿದ್ದ ಬೌದ್ಧ ಪಥವು ಬವಪುರ-ಕುರು, ಕೋಟಲಿಂಗಲ, ಧೂಲಿಕಟ್ಟ, ಕೊಂದಾಪುರ, ಫಣಿಗಿರಿ, ನೇಲಕೊಂಡಪಳ್ಳಿ ಹಾಗೂ ನಾಗಾರ್ಜುನ ಕೊಂಡ ಇತ್ಯಾದಿ ಐತಿಹಾಸಿಕ ತಾಣಗಳ ವೈವಿಧ್ಯತೆಯನ್ನು ಎಕ್ಸ್‌ಪೊದಲ್ಲಿ ಪ್ರದರ್ಶಿಸಲಾಯಿತು. ವಿಶೇಷವಾಗಿ ನಾಗಾರ್ಜುನ ಸಾಗರದ ಬೌದ್ಧವನವನ್ನು ಜಾಗತಿಕ ಆಧ್ಯಾತ್ಮಿಕ ಪ್ರವಾಸೋದ್ಯಮ ಕೇಂದ್ರವಾಗಿ ಚಿತ್ರಿಸಲಾಗಿದೆ. ಬೌದ್ಧ ಧರ್ಮದೊಂದಿಗೆ ಆಳವಾದ ನಂಟಿರುವ ಜಪಾನ್ ಪ್ರವಾಸಿಗರಿಂದ ಈ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.

japan expo

ಸಂಸ್ಕೃತಿ ವಿಭಾಗದಲ್ಲಿ ತೆಲಂಗಾಣದ ಕಲೆ-ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಲಾಯಿತು. ತೇಲುವ ಇಟ್ಟಿಗೆಗಳು ಮತ್ತು ಸೂಕ್ಷ್ಮ ಶಿಲ್ಪಕಲೆಗೆ ಹೆಸರುವಾಸಿಯಾದ ಯುನೆಸ್ಕೋ ಪಟ್ಟಿ ಸೇರಲಿರುವ ರಾಮಪ್ಪ ದೇವಸ್ಥಾನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಚೇರಿಯಲ್ ಸ್ಕ್ರೋಲ್ ಚಿತ್ರಗಳು, ನಿರ್ಮಲ್ ಆಟಿಕೆಗಳು, ಪೊಚಂಪಳ್ಳಿ ಇಕ್ಕಟ್ ಬಟ್ಟೆಗಳು ಶತಮಾನಗಳ ಹಳೆಯ ಹಸ್ತಕಲೆ ಪರಂಪರೆಯನ್ನು ಪ್ರತಿಬಿಂಬಿಸಿದವು. ಸರ್ವಪಿಂಡಿ, ಸಾಕಿನಾಲು ಮೊದಲಾದ ಸಾಂಪ್ರದಾಯಿಕ ರುಚಿಗಳನ್ನು ಸವಿಯುವ ಮೂಲಕ ಪ್ರವಾಸಿಗರು ಸ್ಥಳೀಯ ಸವಿರುಚಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಟಾ 2025 ರಲ್ಲಿ ತೆಲಂಗಾಣ ಪ್ರವಾಸೋದ್ಯಮದ ಯಶಸ್ವಿ ಪ್ರವೇಶವು ರಾಜ್ಯದ ಜಾಗತಿಕ ಪ್ರವಾಸೋದ್ಯಮ ಯಾತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಇದು ಭವಿಷ್ಯದಲ್ಲಿ ಸಾಂಸ್ಕೃತಿಕ ರಾಜತಂತ್ರ ಬಲವರ್ಧನೆಗೆ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರ ಹರಿವಿಗೆ ಹೊಸ ಬಾಗಿಲು ತೆರೆದಂತಾಗಿದೆ. ತೆಲಂಗಾಣ ಈಗ ತನ್ನನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ದೃಢವಾಗಿ ಗುರುತಿಸಿಕೊಂಡಿದೆ.