ತೆಲಂಗಾಣ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಪ್ರವಾಸೋದ್ಯಮ ನೀತಿ 2025- 2030 ಅನ್ನುಇತ್ತೀಚಿಗಷ್ಟೇ ಘೋಷಿಸಿದೆ. ರಾಜ್ಯವನ್ನು ಪ್ರವಾಸಿಗರ ಅಚ್ಚು ಮೆಚ್ಚಿನ ತಾಣಗಳಲ್ಲಿ ಒಂದಾಗಿ ರೂಪಿಸುವ ಉದ್ದೇಶದಿಂದ ಈ ನೀತಿಯನ್ನು ಸಿದ್ಧಪಡಿಸಲಾಗಿದೆ. ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸಿ, ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ತೆಲಂಗಾಣವನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಿಕೊಳ್ಳುವ ಉದ್ದೇಶದಿಂದ ಈ ನೀತಿಯನ್ನು ರೂಪಿಸಲಾಗಿದೆ.

ಹೊಸ ನೀತಿಯಡಿ, ಮುಂದಿನ ಐದು ವರ್ಷಗಳಲ್ಲಿ ₹15,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 3 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಜತೆಗೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನದ ಅಂಕಿಅಂಶಗಳಲ್ಲಿ ತೆಲಂಗಾಣವನ್ನು ಅಗ್ರ ಐದು ರಾಜ್ಯಗಳಲ್ಲಿ ಸೇರಿಸುವ ಉದ್ದೇಶವಿದೆ. ಪ್ರವಾಸೋದ್ಯಮ ಕ್ಷೇತ್ರವು ರಾಜ್ಯದ ಒಟ್ಟು ದೇಶೀಯ ಉತ್ಪನ್ನದಲ್ಲಿ ಕನಿಷ್ಠ 10% ಪಾಲು ನೀಡುವಂತೆ ಯೋಜನೆ ರೂಪಿಸಲಾಗಿದೆ.

char

ಈ ನೀತಿಯು ಪ್ರವಾಸೋದ್ಯಮದ ವಿವಿಧ ಆಯಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಇವುಗಳಲ್ಲಿ ಸುಸ್ಥಿರ ಅಭಿವೃಧ್ಧಿ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ, ಹೈದರಾಬಾದ್‌ನ ಆರೋಗ್ಯ ಮೂಲಸೌಕರ್ಯವನ್ನು‌, ವೆಲ್‌ ನೆಸ್ ಪ್ರವಾಸೋದ್ಯಮವನ್ನು ಬಳಸಿಕೊಳ್ಳುವುದು, ಪಾರಂಪರಿಕ ಹಾಗೂ ಯಾತ್ರಾ ವಲಯಗಳು, ಆಧ್ಯಾತ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ, MICE ಪ್ರವಾಸೋದ್ಯಮ ಅದರಲ್ಲೂ ಮೀಟಿಂಗ್ಸ್, ಇನ್ಸೆಂಟಿವ್ಸ್, ಕಾನ್ಫರೆನ್ಸ್, ಎಕ್ಸಿಬಿಷನ್‌ಗಳಿಗೆ ಅನುಕೂಲ ಕಲ್ಪಿಸುವುದು ಮತ್ತು ಕ್ರೀಡಾ ಪ್ರವಾಸೋದ್ಯಮಗಳ ಬಗೆಗೂ ಒತ್ತು ನೀಡಲಾಗುತ್ತಿದೆ.

ಗುರಿ ಸಾಧನೆಗಾಗಿ ಮೂಲಸೌಕರ್ಯ ಹಾಗೂ ಹೂಡಿಕೆ ಕ್ಷೇತ್ರಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ರಾಜ್ಯವು ವಿಶೇಷ ಪ್ರವಾಸೋದ್ಯಮ ವಲಯಗಳನ್ನು ಸ್ಥಾಪಿಸುವ ಯೋಜನೆ ಹೊಂದಿದ್ದು, ಪ್ರವಾಸಿಗರಿಗೆ ಅನೂಹ್ಯ ಸಾಂಸ್ಕೃತಿಕ ಅನುಭವಗಳನ್ನು ನೀಡಲು ಈ ಯೋಜನೆ ಸಹಕಾರಿಯಾಗಲಿದೆ.

ಮುಂದಿನ ಕಾರ್ಯಕ್ರಮಗಳ ಭಾಗವಾಗಿ, ರಾಜ್ಯವು ಹೈ-ಲೆವೆಲ್ ಪ್ರವಾಸೋದ್ಯಮ ಸಂವಾದ ಆಯೋಜಿಸಲಿದೆ. ಇದರಿಂದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ತಂತ್ರಜ್ಞಾನದ ಸಹಭಾಗಿತ್ವಗಳನ್ನು ನಿರ್ಮಿಸಲು ಅವಕಾಶ ಸಿಗಲಿದೆ. ಅಲ್ಲದೆ, ʼಬತುಕಮ್ಮ ಹಬ್ಬ 2025ʼ ಅನ್ನು ಭವ್ಯವಾಗಿ ಆಚರಿಸಲಾಗುತ್ತಿದ್ದು, ತೆಲಂಗಾಣದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಗೊಳಿಸಲು ನಿರ್ಧರಿಸಲಾಗಿದೆ.

monument t

ಈ ದೂರದೃಷ್ಟಿಯ ಪ್ರವಾಸೋದ್ಯಮ 2.0 ಮಾರ್ಗಸೂಚಿಯೊಂದಿಗೆ, ತೆಲಂಗಾಣವು ತನ್ನ ಸಾಂಸ್ಕೃತಿಕ, ಆರೋಗ್ಯ, ಪರಂಪರೆ ಹಾಗೂ ವ್ಯವಹಾರ ಪ್ರವಾಸೋದ್ಯಮವನ್ನು ಬಲಪಡಿಸಿಕೊಂಡು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಲು ಸಜ್ಜಾಗಿದೆ.