ಜಪಾನ್‌ನ ಪ್ರಮುಖ ಪ್ರವಾಸಿ ತಾಣವಾಗಿರುವ ಟೋಕಿಯೋದ ಶಿಂಜುಕು ಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಅಲ್ಪಾವಧಿ ಹಾಲಿಡೇ ಬಾಡಿಗೆ ಮನೆಗಳಿಗೆ ನಿಷೇಧ ಹೇರಲು ಆಡಳಿತ ಮುಂದಾಗಿದೆ.

ಸ್ಥಳೀಯ ನಿವಾಸಿಗಳಿಂದ ಪ್ರವಾಸಿಗರ ವಿರುದ್ಧ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಿಂಜುಕುವಿನಲ್ಲಿ ಸುಮಾರು 4,000 ಶಾರ್ಟ್‌ಟರ್ಮ್ ಬಾಡಿಗೆ ಮನೆಗಳಿದ್ದು, ಇದು ಜಪಾನ್‌ನ ಒಟ್ಟು ಇಂತಹ ವಸತಿಗಳಲ್ಲಿ ಸುಮಾರು ಶೇ.10ರಷ್ಟಿದೆ. ಪ್ರವಾಸಿಗರು ಕಸವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು, ನಿಗದಿಯಲ್ಲದ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಅತಿಯಾದ ಶಬ್ದ ಹಾಗೂ ಅತಿಕ್ರಮಣದಂಥ ಸಮಸ್ಯೆಗಳ ಕುರಿತು ನಿವಾಸಿಗಳು ದೂರು ನೀಡಿದ್ದಾರೆ.

ಹೊಸ ನಿಯಮದಡಿ ವಸತಿ ಪ್ರದೇಶಗಳು ಹಾಗೂ ಶಾಲೆಗಳ ಸುತ್ತಮುತ್ತ ಖಾಸಗಿ ವಸತಿ ಬಾಡಿಗೆಗೆ ನಿರ್ಬಂಧ ವಿಧಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಸುಮಾರು 2,000 ಬಾಡಿಗೆ ಆಸ್ತಿಗಳು, ಕೆಲವು Airbnb ವಸತಿಗಳೂ ಸೇರಿದಂತೆ, ಮುಚ್ಚುವ ಸಾಧ್ಯತೆಯಿದೆ. ಶಿಂಜುಕುವಿನಲ್ಲಿ ಹಾಲಿಡೇ ಬಾಡಿಗೆಗಳ ವಿರುದ್ಧದ ದೂರುಗಳು ಮಾರ್ಚ್‌ಗೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಶೇ.40ರಷ್ಟು ಹೆಚ್ಚಾಗಿವೆ. ಜಪಾನ್‌ನಲ್ಲಿ ಹೆಚ್ಚುತ್ತಿರುವ ‘ಓವರ್‌ಟೂರಿಸಂ’ ಸಮಸ್ಯೆ ಹಿನ್ನೆಲೆಯಲ್ಲಿ ಸ್ಥಳೀಯ ಜೀವನಮಟ್ಟ ಕಾಪಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.