ತ್ರಿಪುರಾ ರಾಜ್ಯವು ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲು “ಯೂನಿಟಿ ಪ್ರೊಮೊ ಫೆಸ್ಟ್ – 2025” ಎಂಬ ಒಂದು ತಿಂಗಳ ಉತ್ಸವವನ್ನು ಆಯೋಜಿಸಿದೆ. ನವೆಂಬರ್ 8ರಿಂದ ಡಿಸೆಂಬರ್ 12ರವರೆಗೆ ನಡೆಯಲಿರುವ ಈ ಹಬ್ಬವು ರಾಜ್ಯದ ಎಲ್ಲ ಎಂಟು ಜಿಲ್ಲೆಗಳಲ್ಲಿಯೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಪ್ರವಾಸೋದ್ಯಮ ಸಚಿವ ಶ್ರೀ ಸುಶಾಂತ ಚೌಧುರಿ ಅವರು ಮಾತನಾಡಿ- “ಈ ಉತ್ಸವವು ತ್ರಿಪುರಾದ ಸಂಸ್ಕೃತಿ, ಕಲೆ, ಆಹಾರ, ಪರಂಪರೆ ಮತ್ತು ರಾಜ್ಯದ ಆಕರ್ಷಣೀಯ ಪ್ರವಾಸಿ ತಾಣಗಳ ಬಗೆಗೆ ಮಾಹಿತಿ ನೀಡುವ ವಿಶಿಷ್ಟ ವೇದಿಕೆ ಆಗಲಿದೆ, ಹಿಂದಿನ ವರ್ಷದ ಪ್ರೊಮೊ ಫೆಸ್ಟ್‌ಗೆ ದೊರೆತ ಜನಪ್ರಿಯತೆ ಈ ವರ್ಷದ ಪ್ರೊಮೊ ಫೆಸ್ಟ್‌ಗೂ ದೊರೆಯುವ ನಂಬಿಕೆಯಿದೆ” ಎಂದರು.

ಈ ಉತ್ಸವದ ಭವ್ಯ ಉದ್ಘಾಟನೆ ನವೆಂಬರ್ 8 ಮತ್ತು 9ರಂದು ನಾರಿಕೇಲ್ ಕುಂಜಾ (Narikel Kunja) ಎಂಬಲ್ಲಿ ನಡೆಯಲಿದ್ದು, ಆಹಾರ ಮೇಳ, ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು, ಫ್ಯಾಷನ್ ಶೋ ಹಾಗೂ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನಗಳು ಮುಖ್ಯ ಆಕರ್ಷಣೆಗಳಾಗಿವೆ.

Tripura Tourism

ರಾಜ್ಯದ ವಿಭಿನ್ನ ಜಿಲ್ಲೆಗಳಲ್ಲಿಯೂ ಸ್ಥಳೀಯ ಸಾಂಪ್ರದಾಯಿಕ ಕಲಾರೂಪಗಳು ಹಾಗೂ ಜನಪದ ಸಂಗೀತದ ಮೂಲಕ ಪ್ರವಾಸಿಗರಿಗೆ ತ್ರಿಪುರಾದ ಸಾಂಸ್ಕೃತಿಕ ಸೊಗಸನ್ನು ತೋರಿಸಲಾಗುವುದು. ಉತ್ಸವದ ಅಂತಿಮ ಹಂತವು ಅಗರ್‌ತಲಾದಲ್ಲಿ ಡಿಸೆಂಬರ್ 11 ಮತ್ತು 12ರಂದು ನಡೆಯಲಿದ್ದು, ಜನಪ್ರಿಯ ಪ್ಲೇಬ್ಯಾಕ್ ಸಿಂಗರ್‌ ಜುಬಿನ್ ನೌಟಿಯಾಲ್ ಅವರ ವಿಶೇಷ ಸಂಗೀತ ಕಾರ್ಯಕ್ರಮವು ಸಮಾರೋಪ ಸಮಾರಂಭದ ಮುಖ್ಯ ಆಕರ್ಷಣೆಯಾಗಲಿದೆ.

ಈ ಕಾರ್ಯಕ್ರಮ ಆಯೋಜನೆಯ ಹಿಂದಿರುವ ರಾಜ್ಯ ಸರ್ಕಾರದ ಉದ್ದೇಶ ಪ್ರವಾಸೋದ್ಯಮದ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ, ತ್ರಿಪುರಾದ ಸಾಂಸ್ಕೃತಿಕ ಹೆಗ್ಗಳಿಕೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದಾಗಿದೆ.