ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜೀಬ್ರಾ (ಹೇಸರಗತ್ತೆ)ಗಳ ಸಂಖ್ಯೆ ಹತ್ತಕ್ಕೆ ಏರಿಕೆ ಕಂಡಿದೆ. 2026ರಲ್ಲಿ ಈ ಸಂಖ್ಯೆ 8 ಆಗಿತ್ತು. ಜನವರಿ ತಿಂಗಳೊಂದರಲ್ಲಿಯೇ ಎರಡು ಮರಿಗಳು ಜನಸಿದ್ದು ಈ ಸಂಖ್ಯೆ ಹತ್ತಕ್ಕೆ ಏರಿಕೆ ಕಂಡಿದೆ.

ಈ ಕುರಿತು ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ) ತಡವಾಗಿ ಮಾಹಿತಿ ಹಂಚಿಕೊಂಡಿದೆ. ಜನವರಿ 17ರಂದು ಎರಡೂವರೆ ವರ್ಷದ ಕೋಕಿಲ ಮತ್ತು ಜನವರಿ 28ರಂದು 12 ವರ್ಷದ ಕಾವೇರಿ ಎರಡು ಜೀಬ್ರಾಗಳು ತಲಾ ಒಂದೊಂದು ಮರಿಗಳಿಗೆ ಜನ್ಮ ನೀಡಿವೆ. ವಿಶೇಷವೆಂದರೆ ಈ ಎರಡೂ ಮರಿಗಳು ಹೆಣ್ಣು ಮರಿಗಳಾಗಿವೆ. ಸಧ್ಯ ಇತರೆ ಜೀಬ್ರಾಗಳೊಂದಿಗೇ ಅವುಗಳನ್ನೂ ಇರಿಸಲಾಗಿದ್ದು, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿ ಪಾಲಕರ ಆರೈಕೆಯಲ್ಲಿವೆ. ಹಾಗಾಗಿ ಇನ್ಮುಂದೆ ನೀವು ಬನ್ನೇರುಘಟ್ಟಕ್ಕೆ ಹೋದಾಗ ಈ ಪುಟಾಣಿ ಜೀಬ್ರಾ ಮರಿಗಳನ್ನು ಕಣ್ತುಂಬಿಕೊಳ್ಳು ಮರೆಯಬೇಡಿ.

ನಿಮಗಿದು ಗೊತ್ತಾ?

ಜೀಬ್ರಾ ಮರಿಗಳು ಆರಂಭದಲ್ಲಿ ಕಂದು ಮತ್ತು ಬಿಳಿ ಪಟ್ಟಿಗಳನ್ನು ಹೊಂದಿರುತ್ತವೆ. ಕಾಲಾನಂತರದಲ್ಲಿ ಈ ಕಂದು ಪಟ್ಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಜೀಬ್ರಾಗಳ ಗರ್ಭಾವಸ್ಥೆ 12 ತಿಂಗಳು ಕೆಲವೊಮ್ಮೆ ಇದು 13 ತಿಂಗಳುಗಳವರೆಗೂ ಮುಂದುವರೆಯಬಹುದು. ಅಲ್ಲದೆ ಮರಿಗಳ ಕುರಿತು ತಾಯಿ ಜೀಬ್ರಾಗಳು ಸದಾ ಕಾಳಜಿ ವಹಿಸುತ್ತವೆ.