ವೀಸಾ ಬೇಕಿದ್ದರೆ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಅನ್‌ಲಾಕ್ ಮಾಡಿಕೊಳ್ಳಿ
ನೀವು ಅಮೆರಿಕ ವೀಸಾ ಅರ್ಜಿ ಸಲ್ಲಿಸುವ ಯೋಚನೆಯಲ್ಲಿದ್ದೀರಾ ? ಹಾಗಾದರೆ ಅದರ ಜತೆಗೆ ಐದು ವರ್ಷಗಳಲ್ಲಿ ಬಳಸಿದ ನಿಮ್ಮ ಸಾಮಾಜಿಕ ಜಾಲತಾಣಗಳ ಯೂಸರ್ ನೇಮ್ ಅನ್ನು ಡಿಎಸ್-160 ಫಾರ್ಮ್‌ನಲ್ಲಿ ಬಹಿರಂಗಪಡಿಸಲೇ ಬೇಕು.
ನವದೆಹಲಿ: ಅಮೆರಿಕದ ಎಫ್ ಎಂ ಜೆ ವೀಸಾ ಬೇಕಿದ್ದರೆ ಅರ್ಜಿದಾರರು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿನ ವೈಯಕ್ತಿಕ ವಿವರ ವಿಭಾಗವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿ ತೆರೆದಿಡಬೇಕು ಎಂದು 'ಶ್ವೇತಭವನ'ದ ಪ್ರಕಟಣೆ ತಿಳಿಸಿದೆ. ಒಂದು ವೇಳೆ ಈ ರೀತಿ ಮಾಡದೇ ಹೋದರೆ ವೀಸಾ ನಿರಾಕರಿಸುವ ಮತ್ತು ಭವಿಷ್ಯದಲ್ಲಿ ವೀಸಾ ಸಿಗದೆ ಹೋಗುವ ಸಾಧ್ಯತೆ ಇದೆ ಎಂದು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಎಚ್ಚರಿಸಿದೆ.
ವೀಸಾಗೆ ಅರ್ಜಿ ಸಲ್ಲಿಸಿರುವವರು ತಕ್ಷಣವೇ ತಮ್ಮ ಫೇಸ್‌ಬುಕ್, ಇನ್ ಸ್ಟಾಗ್ರಾಂ, ವಾಟ್ಸಾಪ್, ಎಕ್ಸ್ ಮೊದಲಾದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಪ್ರೊಫೈಲ್ ವಿಭಾಗವನ್ನು 'ಅನ್ ಲಾಕ್' ಮಾಡಿ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಡಬೇಕು ಎಂದು ಅಮೆರಿಕ ಸರಕಾರ ಘೋಷಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಯ ಅಧಿಕೃತ ಸಾಮಾಜಿಕ ಜಾಲತಾಣ ಹ್ಯಾಂಡಲ್ 'ಪ್ರತಿ ವೀಸಾ ತೀರ್ಪು ರಾಷ್ಟ್ರೀಯ ಭದ್ರತಾ ನಿರ್ಧಾರವಾಗಿದೆ. ವೀಸಾಗೆ ಅರ್ಜಿ ಸಲ್ಲಿಸಿದವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮುಕ್ತಗೊಳಿಸದೇ ಇದ್ದರೆ ಅವರ ವೀಸಾ ಅರ್ಜಿ ತಿರಸ್ಕೃತಗೊಳ್ಳುತ್ತದೆ' ಎಂದು ತಿಳಿಸಿದೆ.

ಜೂ.23ರಂದು ಅಮೆರಿಕ ರಾಯಭಾರ ಕಚೇರಿಯು ವಲಸೆಯ ಉದ್ದೇಶ ಇಲ್ಲದ ಎಫ್, ಎಂ ಅಥವಾ ಜೆ ವೀಸಾ ಕೋರಿ ಅರ್ಜಿ ಸಲ್ಲಿಸುವವರು ತಮ್ಮ ಸಾಮಾಜಿಕ ಜಾಲತಾಣಗಳ ಸೆಟ್ಟಿಂಗ್ಸ್ ಅನ್ನು 'ಪ್ರೈವೇಟ್'ನಿಂದ 'ಪಬ್ಲಿಕ್ ' ಗೆ ಬದಲಾವಣೆ ಮಾಡುವಂತೆ ಸೂಚಿಸಿತ್ತು. ಇದು ಅವರ ಗುರುತು ಖಚಿತಪಡಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಸೂಚಿಸಿತ್ತು.
ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದಲ್ಲಿ ವಲಸೆ ನೀತಿ ಬಿಗಿಗೊಳಿಸಲಾಗಿದೆ. ವಲಸೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದೆ. ಅಮೆರಿಕದ ವೀಸಾವು ಸವಲತ್ತೇ ಹೊರತು ಹಕ್ಕಲ್ಲ ಎಂಬುದು ಅಮೆರಿಕ ಇದೀಗ ಸ್ಪಷ್ಟವಾಗಿ ಹೇಳುತ್ತಿದೆ.