ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿ ಪೌರತ್ವ ಪಡೆಯುವ ಉದ್ದೇಶದಿಂದ ಪ್ರವಾಸ ಮಾಡುವವರ ವಿರುದ್ಧ ಅಮೆರಿಕ ಸರಕಾರ ಕಠಿಣ ನಿಲುವು ತಳೆದಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಅಮೆರಿಕದ ಎಂಬೆಸಿಯು ಭಾರತೀಯ ಪ್ರಯಾಣಿಕರಿಗೆ ಎಚ್ಚರಿಕೆಯನ್ನು ನೀಡಿದೆ.

ಎಂೆಸಿ ನೀಡಿರುವ ಪ್ರಕಟಣೆಯಂತೆ, “ಬರ್ತ್ ಟೂರಿಸಂ” ಉದ್ದೇಶದಿಂದ ಅಮೆರಿಕಕ್ಕೆ ಪ್ರಯಾಣಿಸಲು ಯತ್ನಿಸುವವರಿಗೆ ಬಿ-1/ಬಿ-2 ಪ್ರವಾಸಿ ವೀಸಾವನ್ನು ಮಂಜೂರು ಮಾಡಲಾಗುವುದಿಲ್ಲ. ಪ್ರವಾಸದ ಮುಖ್ಯ ಉದ್ದೇಶವೇ ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡುವುದಾಗಿದೆ ಎಂದು ವೀಸಾ ಪರಿಶೀಲನೆಯ ವೇಳೆ ಸ್ಪಷ್ಟವಾದರೆ, ಅಂಥ ಅರ್ಜಿಗಳನ್ನು ಕಾನ್ಸುಲರ್ ಅಧಿಕಾರಿಗಳು ತಕ್ಷಣವೇ ನಿರಾಕರಿಸಲಿದ್ದಾರೆ ಎಂದು ತಿಳಿಸಲಾಗಿದೆ.

Birth tourism


ಅಮೆರಿಕದ ವಿದೇಶಾಂಗ ಇಲಾಖೆ, ಪ್ರವಾಸಿ ವೀಸಾವನ್ನು ಮಗುವಿಗೆ ಜನ್ಮ ನೀಡುವುದರ ಮೂಲಕ ಪೌರತ್ವ ಪಡೆಯಲು ಬಳಸುವುದು, ವೀಸಾ ನಿಯಮಗಳ ದುರುಪಯೋಗವಾಗಿದ್ದು, ಇದು ಅಮೆರಿಕದ ಕಾನೂನಿಗೆ ವಿರುದ್ಧವಾಗಿದೆ. ಇಂಥ ಪ್ರಯಾಣಗಳಿಂದ ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ವೆಚ್ಚದ ಭಾರ ಅಮೆರಿಕದ ತೆರಿಗೆದಾರರ ಮೇಲೆ ಬೀಳುವ ಸಾಧ್ಯತೆಯೂ ಇದೆ, ಹೀಗಾಗಿ ʼಬರ್ತ್ ಟೂರಿಸಂʼ ಉದ್ದೇಶದಿಂದ ಪ್ರಯಾಣ ಬೆಳೆಸುವವರಿಗೆ ವೀಸಾ ಮಂಜೂರಾತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕ್ರಮವು ಈಗಾಗಲೇ ಜಾರಿಯಲ್ಲಿರುವ ವೀಸಾ ನಿಯಮಗಳ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ವೀಸಾ ಪರಿಶೀಲನೆ ಇನ್ನಷ್ಟು ಕಟ್ಟುನಿಟ್ಟಾಗಲಿದೆ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಪ್ರವಾಸ ಯೋಜಿಸುತ್ತಿರುವ ಭಾರತೀಯರು ತಮ್ಮ ಪ್ರಯಾಣದ ಉದ್ದೇಶ ಮತ್ತು ವೀಸಾ ನಿಯಮಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಲಹೆ ನೀಡಲಾಗಿದೆ.