ವೆಲ್‌ನೆಸ್ ಟೂರಿಸಂ ಉತ್ತೇಜನಕ್ಕೆ ಉತ್ತರಾಖಂಡದಿಂದ ನೂತನ ಹೆಜ್ಜೆ!
ಈ ನ್ಯಾಚುರೋಪತಿ ಆಸ್ಪತ್ರೆಗಳು ಸಂಪ್ರದಾಯಬದ್ಧ ಆಸ್ಪತ್ರೆಗಳಂತಿರದೆ, ಐಷಾರಾಮಿ ರೆಸಾರ್ಟ್ ಮಾದರಿಯಲ್ಲಿ ವಿನ್ಯಾಸಗೊಳ್ಳಲಿವೆ. ಇಲ್ಲಿ ಔಷಧಿ ರಹಿತ ಚಿಕಿತ್ಸಾ ವಿಧಾನಗಳಾದ ಪೋಷಣಾ ಚಿಕಿತ್ಸೆ, ಮಣ್ಣು ಚಿಕಿತ್ಸೆ, ಸೂರ್ಯ ಚಿಕಿತ್ಸೆ, ಯೋಗಾಭ್ಯಾಸ, ವ್ಯಾಯಾಮ ಮತ್ತು ಮನಸ್ಸು ಹಾಗೂ ದೇಹದ ಸಮತೋಲನಕ್ಕೆ ಅಗತ್ಯವಿರುವ ಚಿಕಿತ್ಸೆಗಳು ದೊರೆಯಲಿವೆ.
ವೆಲ್‌ನೆಸ್ ಟೂರಿಸಂ ಉತ್ತೇಜಿಸುವ ಉದ್ದೇಶದಿಂದ ಉತ್ತರಾಖಂಡ ಸರಕಾರ ದೇಶದಲ್ಲೇ ಪ್ರಪ್ರಥಮ ಬಾರಿಗೆ ನ್ಯಾಚುರೋಪತಿ ಆಸ್ಪತ್ರೆಗಳ ಸ್ಥಾಪನೆಗೆ ಮುಂದಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ರಾಜ್ಯವನ್ನು ಆಯುಷ್ ಆಧಾರಿತ ಆರೋಗ್ಯ ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ರೂಪಿಸುವ ಗುರಿಯನ್ನು ಸರಕಾರ ಹೊಂದಿದೆ.
ರಾಜ್ಯದ ಆಯುಷ್ ಇಲಾಖೆಯ ಮೂಲಕ ಈ ಯೋಜನೆ ಜಾರಿಗೆ ಬರಲಿದ್ದು, ಚಾಲ್ಪವತ್ ಮತ್ತು ಪಿಥೋರಾಗಢ ಜಿಲ್ಲೆಗಳಲ್ಲಿ ಆಸ್ಪತ್ರೆಗಳ ಸ್ಥಾಪನೆಗಾಗಿ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದೆ. ಬಾಗೇಶ್ವರ ಜಿಲ್ಲೆಯಲ್ಲಿಯೂ ಸ್ಥಳ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನ್ಯಾಚುರೋಪಥಿ ಆಸ್ಪತ್ರೆಗಳು ಸಂಪ್ರದಾಯಬದ್ಧ ಆಸ್ಪತ್ರೆಗಳಂತಿರದೆ, ಐಷಾರಾಮಿ ರೆಸಾರ್ಟ್ ಮಾದರಿಯಲ್ಲಿ ವಿನ್ಯಾಸಗೊಳ್ಳಲಿವೆ. ಇಲ್ಲಿ ಔಷಧಿ ರಹಿತ ಚಿಕಿತ್ಸಾ ವಿಧಾನಗಳಾದ ಪೋಷಣಾ ಚಿಕಿತ್ಸೆ, ಮಣ್ಣು ಚಿಕಿತ್ಸೆ, ಸೂರ್ಯ ಚಿಕಿತ್ಸೆ, ಯೋಗಾಭ್ಯಾಸ, ವ್ಯಾಯಾಮ ಮತ್ತು ಮನಸ್ಸು ಹಾಗೂ ದೇಹದ ಸಮತೋಲನಕ್ಕೆ ಅಗತ್ಯವಿರುವ ಚಿಕಿತ್ಸೆಗಳು ದೊರೆಯಲಿವೆ.

ಯೋಜನೆಗೆ ಕೇಂದ್ರ ಸರಕಾರದಿಂದ ಆರ್ಥಿಕ ಸಹಾಯ ಪಡೆಯಲು ಶೀಘ್ರದಲ್ಲೇ ಆಯುಷ್ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ ಸೇರಿದಂತೆ ಪರಂಪರಾಗತ ವೈದ್ಯಕೀಯ ಚಿಕಿತ್ಸೆಯನ್ನು ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ಜನರಿಗೆ ಉಪಯುಕ್ತವಾಗುವಂತೆ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಧನ್ ಸಿಂಗ್ ರಾವತ್ ಅವರು ಯೋಜನೆಯ ಮಾಹಿತಿಯನ್ನು ದೃಢೀಕರಿಸಿದ್ದು, ಮೊದಲ ಹಂತದಲ್ಲಿ ಮೂರು ಜಿಲ್ಲೆಗಳಲ್ಲಿ ಈ ಆಸ್ಪತ್ರೆಗಳು ಸ್ಥಾಪನೆಯಾಗಲಿವೆ ಎಂದು ತಿಳಿಸಿದ್ದಾರೆ. ಆಯುಷ್ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಯೋಜನೆಯಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ದೊರೆಯಲಿದ್ದು, ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ.