ಭಾರತದ ಜನಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ 'ಜೆನ್‌ ಜಿ' ಇಂದು ಜಾಗತಿಕ ಪ್ರವಾಸೋದ್ಯಮದ ದಿಕ್ಕನ್ನೇ ಬದಲಿಸುತ್ತಿದೆ. ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ, ಈ ಯುವ ಪೀಳಿಗೆಯು ವಿಶಿಷ್ಟ ಅನುಭವಗಳು ಮತ್ತು ತಂತ್ರಜ್ಞಾನ ಆಧಾರಿತ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಜೆನ್‌ ಜಿ ಪ್ರಯಾಣಿಕರು ಡಿಜಿಟಲ್ ಯುಗದಲ್ಲೇ ಬೆಳೆದವರಾದ್ದರಿಂದ, ಅವರ ಪ್ರತಿಯೊಂದು ಪ್ರಯಾಣದ ಹಂತವೂ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುತ್ತದೆ. ಇವರು ಟ್ರಾವೆಲ್ ಏಜೆಂಟ್‌ಗಳಿಗಿಂತ ಹೆಚ್ಚಾಗಿ ಇನ್‌ಸ್ಟಾಗ್ರಾಮ್, ಗೂಗಲ್‌ ಮತ್ತು ಯೂಟ್ಯೂಬ್‌ಗಳನ್ನು ತಮ್ಮ ಪ್ರಯಾಣದ ಮಾಹಿತಿಗಾಗಿ ಬಳಸುತ್ತಾರೆ. ಪ್ಲಾನ್ ಮಾಡುವುದರಿಂದ ಹಿಡಿದು ಪಾವತಿಯವರೆಗೆ ಎಲ್ಲವನ್ನೂ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕವೇ ಮಾಡುತ್ತಾರೆ.

ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ವಿಶೇಷ ಆತಿಥ್ಯಕೂಟ

ಪ್ರಯಾಣದ ರೂಟ್ ಮ್ಯಾಪ್ ಮತ್ತು ಹೊಟೇಲ್‌ಗಳನ್ನು ಆಯ್ಕೆ ಮಾಡಲು ಇವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೂಲ್ಸ್‌ ಬಳಸುತ್ತಿದ್ದಾರೆ. ಸಾಂಪ್ರದಾಯಿಕ ಪ್ರವಾಸಿಗರಂತೆ ಕೇವಲ ಸ್ಮಾರಕಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವುದು ಇವರಿಗೆ ರುಚಿಸುವುದಿಲ್ಲ. ಹೋಂ ಸ್ಟೇ ಅಲ್ಲಿ ಉಳಿದುಕೊಳ್ಳುವುದು, ಅಲ್ಲಿನ ಅಡುಗೆಯನ್ನು ಕಲಿಯುವುದು ಮತ್ತು ಹಿಡನ್‌ ಜೆಮ್ಸ್‌ ಹುಡುಕುವುದು ಇವರ ಆದ್ಯತೆ.

ಟ್ರೆಕ್ಕಿಂಗ್, ಸ್ಕೂಬಾ ಡೈವಿಂಗ್ ಮತ್ತು ಸೋಲೋ ಟ್ರಾವೆಲ್ ಈ ಪೀಳಿಗೆಯ ಜನಪ್ರಿಯ ಚಟುವಟಿಕೆಗಳು. ಪ್ಲಾಸ್ಟಿಕ್ ಮುಕ್ತ ಹೊಟೇಲ್‌ಗಳು ಮತ್ತು ಪರಿಸರಕ್ಕೆ ಹಾನಿ ಮಾಡದ ಸಾರಿಗೆ ವ್ಯವಸ್ಥೆಯನ್ನು ಇವರು ಹೆಚ್ಚು ಇಷ್ಟಪಡುತ್ತಾರೆ. ಸ್ಥಳೀಯ ಸಂಸ್ಕೃತಿಗೆ ಧಕ್ಕೆ ತರದಂತೆ ವರ್ತಿಸುವುದು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ನೀಡುವುದನ್ನು ಇವರು ತಮ್ಮ ಜವಾಬ್ದಾರಿ ಎಂದು ಭಾವಿಸುತ್ತಾರೆ.

'ವರ್ಕ್ ಫ್ರಮ್ ಎನಿವೇರ್' ಸೌಲಭ್ಯವನ್ನು ಬಳಸಿಕೊಂಡು, ಕೆಲಸದ ಜತೆಗೇ ಪ್ರವಾಸ ಮಾಡುವ ಸಂಸ್ಕೃತಿಯನ್ನು ಜನಪ್ರಿಯಗೊಳಿಸಿದ್ದಾರೆ. ಭಾರತದ ಒಟ್ಟು ಪ್ರವಾಸಿಗರಲ್ಲಿ ಜೆನ್‌ ಜಿ ಮತ್ತು ಮಿಲೇನಿಯಲ್‌ಗಳ ಪಾಲು ಈಗ 50%ಕ್ಕಿಂತ ಹೆಚ್ಚು. ಸುಮಾರು 65-70% ಯುವ ಪ್ರಯಾಣಿಕರು ಪ್ರವಾಸಕ್ಕಾಗಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಿಂದ ಪ್ರೇರಿತರಾಗುತ್ತಾರೆ. ಸೋಲೋ ಟ್ರಾವೆಲಿಂಗ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ 40% ಏರಿಕೆ ಕಂಡುಬಂದಿದೆ.