Thursday, June 12, 2025
Thursday, June 12, 2025

ಆಹಾ ಅಂಡಮಾನ್...

ಪ್ರವಾಸಿಗರ ಕನಸಿನ ತಾಣ ಅಂಡಮಾನ್‌ -ನಿಕೋಬಾರ್..ಇಲ್ಲಿರುವ ದ್ವೀಪಗಳನ್ನು ಸುತ್ತಾಡಿಬರಬೇಕು ಎಂದುಕೊಳ್ಳುವ ಅನೇಕರಿಗೆ ಹೇಗೆ ಹೋದರೆ ಸೂಕ್ತ, ಯಾವೆಲ್ಲಾ ಸ್ಥಳಗಳನ್ನು ಭೇಟಿ ಮಾಡಬಹುದು ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ. - ಸುಪ್ರೀತಾ ವೆಂಕಟ್

ಅಂಡಮಾನ್ ಅಂದಾಕ್ಷಣ ನೆನಪಿಗೆ ಬರುವುದು ನಾವುಗಳು ಕೇಳಿದ ಇತಿಹಾಸದ ಪುಟಗಳಲ್ಲಿ ಬರುವ ಅಂಡಮಾನ್ ಜೈಲು.. ನಿರ್ದಾಕ್ಷಿಣ್ಯವಾಗಿ ಅಲ್ಲಿನ ಜೈಲಿಗೆ ಭಾರತೀಯರನ್ನು ತಳ್ಳುತ್ತಿದ್ದಂತಹ ಕಥೆಗಳು.. ಅಂಡಮಾನ್ ಅಂದರೆ ಅಷ್ಟೇನಾ? ಅಲ್ಲಿಗೊಮ್ಮೆ ಪ್ರವಾಸ ಕೈಗೊಂಡವರು ಒಪ್ಪದ ಮಾತು.. ಮೈನವಿರೇಳಿಸುವ ಘಟನೆಗಳ ಜೊತೆಗೆ ಮನಸ್ಸೂರೆಗೊಳ್ಳುವ ತಾಣಗಳೂ ಇವೆ.. ಇತ್ತೀಚೆಗೆ ಪ್ರವಾಸಿ ತಾಣವಾಗಿ ಅಂಡಮಾನ್ ಜನರನ್ನು ಆಕರ್ಷಿಸುತ್ತಿದೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ ಒಟ್ಟು ಹಲವಾರು ದ್ವೀಪಗಳನ್ನು ಹೊಂದಿದೆ. ಆದರೆ ನಿಕೋಬಾರ್'ಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಅಂಡಮಾನ್ ಅಲ್ಲಿ ಕೂಡ ಕೆಲವು ದ್ವೀಪಗಳಿಗಷ್ಟೇ ಹೋಗಬಹುದು.

ಪೋರ್ಟ್ ಬ್ಲೇರ್

ಅಂಡಮಾನ್ ತಲುಪಬೇಕಾದರೆ ಎರಡು ಆಯ್ಕೆಗಳಿವೆ. ವಿಮಾನ ಹಾಗೂ ಕ್ರೂಸ್. ಕ್ರೂಸ್ ಅಲ್ಲಿ ಹೋಗಬೇಕಾದರೆ ಹಲವು ದಿನಗಳೇ ಬೇಕಾಗುತ್ತೆಂದು, ವಿಮಾನ ಎಂದು ನಿರ್ಧರಿಸಿದೆವು. ಬೆಂಗಳೂರಿನಿಂದ ಚೆನ್ನೈಗೆ ಮೊದಲ ವಿಮಾನ ಹಾಗೂ ಚೆನ್ನೈ ಇಂದ ಪೋರ್ಟ್ ಬ್ಲೇರ್'ಗೆ ಎರಡನೆಯದು. ಚೆನ್ನೈ ಮೂಲಕವೇ ವಿಮಾನಗಳ ಹಾರಾಟ, ಇಲ್ಲಿಂದ ಅಂಡಮಾನಿಗೆ ಸೀದಾ ವಿಮಾನಗಳಿಲ್ಲ. ಅಂಡಮಾನ್ ಹತ್ತಿರ ಹತ್ತಿರ ಬರುತ್ತಿದ್ದಂತೆ ಸ್ವಚ್ಛ, ವಿವಿಧ ಛಾಯೆಗಳ ನೀಲಿ ಬಣ್ಣದ ಸಮುದ್ರ ನಮ್ಮನ್ನು ಸ್ವಾಗತಿಸುತ್ತೆ. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದಾಗ ಮಟ ಮಟ ಮಧ್ಯಾಹ್ನ. ಅಲ್ಲಿಂದ ಹೋಟೆಲ್ ತಲುಪಿ, ಊಟ ಮಾಡಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು. ಸಂಜೆ ಕಾರ್ಬಿನ್ಸ್ ಕೇವ್ ಬೀಚ್ ಸುತ್ತಾಟ ಹಾಗೂ ಅತೀ ಮುಖ್ಯವಾದ ನೋಡಲೇಬೇಕಾದ ಸೆಲ್ಯೂಲರ್ ಜೈಲ್. ಜೈಲು ಸಮೀಪವಾಗುತ್ತಿದ್ದಂತೆ ಚಿಕ್ಕಂದಿನಲ್ಲಿ ಓದಿದ ಹೋರಾಟಗಾರರ ಚಿತ್ರಣಗಳು ಕಣ್ಣ ಮುಂದೆ ಬಂದಂತೆ ಭಾಸವಾಯಿತು. ಜೈಲಿನ ಎದುರುಗಡೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರ ಆಕೃತಿಗಳಿವೆ, ಒಬ್ಬೊಬ್ಬರ ಕಥೆಗಳನ್ನು ಓದುವಾಗ ಕಣ್ಣಂಚು ತೇವವಾಗದೇ ಇರಲ್ಲ. ಜೈಲಿನಲ್ಲಿ ಸೌಂಡ್ ಅಂಡ್ ಲೈಟ್ ಶೋ ಇರುತ್ತೆ, ಆಂಫಿ ಥಿಯೇಟರ್ ತರ ಇರುವ ಜಾಗದಲ್ಲಿ ಅಂದು ಏನೆಲ್ಲ ಆಯ್ತು ಎಂಬುದನ್ನು ರೆಕಾರ್ಡ್ ಮಾಡಿರುವ ಧ್ವನಿಯೊಂದು ಹೇಳುತ್ತಿದ್ದರೆ, ಆಯಾಯ ಹೋರಾಟಗಾರರ ಜೈಲಿನ ಕೋಣೆಯ ಮೇಲೆ ಬೆಳಕು ಬೀಳುತ್ತೆ. ಅದೊಂದು ರೋಮಾಂಚನಕಾರಿ ಒಂದು ಗಂಟೆಯ ಶೋ..

cd460705-35aa-4cc8-b9ca-3ace64b82326

ಹ್ಯಾವ್ಲಾಕ್ ಐಲ್ಯಾಂಡ್

ಒಂದು ದ್ವೀಪದಿಂದ ಇನ್ನೊಂದಕ್ಕೆ ಕ್ರೂಸ್'ಗಳಲ್ಲೇ ಪ್ರಯಾಣಿಸಬೇಕು. ಸರ್ಕಾರಿ ಹಾಗೂ ಪ್ರೈವೇಟ್ ಕ್ರೂಸ್ಗಳಿರುತ್ತವೆ. ಅಂಡಮಾನಿಗೆ ಪಯಣಿಸುವ ಮೊದಲೇ ಬುಕ್ ಮಾಡಿದರೆ ಒಳ್ಳೆಯದು. ಬೆಳಿಗ್ಗೆ ಸುಮಾರು 7-7.30 ಗಂಟೆಯ ಹೊತ್ತಿಗೆ ಹೊರಡುವ ಕ್ರೂಸ್ಗಳು, ಅದರ ಅನುಭವ ಖುಷಿ ನೀಡುತ್ತೆ. ಅಂಡಮಾನ್ ದ್ವೀಪಗಳಲ್ಲಿ ಆಕರ್ಷವಾದ ದ್ವೀಪಗಳಲ್ಲಿ ಒಂದು ಹ್ಯಾವ್ಲಾಕ್ ಐಲ್ಯಾಂಡ್, ಹಾಗೆಯೇ ಅಂಡಮಾನಿನ ಅತೀ ದೊಡ್ಡದಾದ ದ್ವೀಪ. ಇಲ್ಲಿಯ ರಾಧಾನಗರ ಬೀಚ್, ಎಲಿಫೆಂಟ್ ಬೀಚ್ ಪ್ರಸಿದ್ಧವಾಗಿದೆ. ರಾಧಾನಗರ ಬೀಚ್ 2004ರಲ್ಲಿ ಏಷ್ಯಾದ ಬೆಸ್ಟ್ ಬೀಚ್ ಖ್ಯಾತಿಗೆ ಒಳಗಾಗಿತ್ತು. ಅಲ್ಲಿಯ ಸಮುದ್ರದ ಅಂದ ವರ್ಣಿಸಲಾಗದು, ಮರಳು ಶುದ್ಧವಾಗಿರುತ್ತೆ, ಮಣ್ಣು ಮಿಶ್ರವಾಗಿರಲ್ಲ. ಎಲಿಫೆಂಟ್ ಬೀಚ್ ಅಲ್ಲಿ ನೀರಿನಾಟಗಳನ್ನು ಆಡಬಹುದಾಗಿದೆ, ಸ್ನೋರ್ಕೆಲಿಂಗ್, ಸೀ ವಾಕಿಂಗ್, ಸ್ಕೂಬಾ ಡೈವಿಂಗ್ ಹೀಗೆ ಸಾಧ್ಯವಾದವುಗಳನ್ನೆಲ್ಲಾ ಪ್ರಯತ್ನಿಸಬಹುದು. ತಿಳಿ ನೀಲಿ ಬಣ್ಣದ ನೀರಲ್ಲಿ ಬಣ್ಣ ಬಣ್ಣದ ಮೀನುಗಳನ್ನು, ಹವಳಗಳನ್ನು ತೀರಾ ಹತ್ತಿರದಿಂದ ನೋಡಿ ಆನಂದಿಸಬಹುದು. ಈ ದ್ವೀಪದಲ್ಲಿ ಹಾಡುಗಳನ್ನು, ಧಾರಾವಾಹಿಗಳ ತುಣುಕುಗಳನ್ನು ಚಿತ್ರಿಸಲಾಗಿದೆ. ಅಂಡಮಾನಿಗೆ ಪ್ರವಾಸ ಕೈಗೊಂಡಾಗ ತಪ್ಪದೇ ಹೋಗಲೇಬೇಕಾದ ದ್ವೀಪ.

Havelock-Islandbg

ನೀಲ್ ಐಲ್ಯಾಂಡ್

ನೀಲ್ ಐಲ್ಯಾಂಡ್ ಅಲ್ಲಿ ಭರತಪುರ, ಲಕ್ಷ್ಮಣಪುರ ಹಾಗೂ ಸೀತಾಪುರ ಸಮುದ್ರಗಳಿವೆ. ಇಲ್ಲಿಯ ಇನ್ನೊಂದು ತಾಣವೆಂದರೆ ಕಲ್ಲುಗಳಿಂದ ಸ್ವಾಭಾವಿಕವಾಗಿ ನಿರ್ಮಿತವಾದ ಹೌರಾ ಬ್ರಿಡ್ಜ್. ಮಧ್ಯಾಹ್ನ ಹೊತ್ತಿಗೆ ಇದರ ಹತ್ತಿರ ಸಮುದ್ರದ ನೀರು ಇರೋಲ್ಲ, ಆ ಸಮಯದಲ್ಲಿ ಬ್ರಿಡ್ಜ್ ಹತ್ತಿರ ನಡೆಯಬಹುದು. ಲಕ್ಷಣಪುರ ಸಮುದ್ರದಲ್ಲಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲೇಬೇಕು, ಗಿಜಿಗುಡುವ ಜನಜಂಗುಳಿಯ ಮಧ್ಯೆ ಸೂರ್ಯ ಮುಳುಗುವುದನ್ನು ನೋಡಲು ಏನೂ ಅಡ್ಡಿಯಿಲ್ಲ. ಉಳಿದೆರಡು ಸಮುದ್ರಗಳು ಹವಳಗಳು, ನೋಡಿದಷ್ಟು ತಣಿಯದ ವಿವಿಧ ಜಾತಿಯ ಸಣ್ಣ ಸಣ್ಣ ಮೀನುಗಳಿಗೆ ಹೆಸರುವಾಸಿ.

m7tu3wrhk24cpcdhqipsos5v2k7x_1537009271_Neil_Island

ಅಂಡಮಾನಿನ ವಿಶೇಷತೆ:

ಇಲ್ಲಿ ಸಂಜೆ 6 ಗಂಟೆಯ ಹೊತ್ತಿಗೆಲ್ಲ ಕತ್ತಲಾದರೆ ಬೆಳಿಗ್ಗೆ 5 ಗಂಟೆಗೆಲ್ಲ ಸೂರ್ಯೋದಯ. ಬೆಳಿಗ್ಗೆಯಿಂದ ಕೆಲವು ಗಂಟೆಗಳ ತನಕ ಸಮುದ್ರದಲೆಗಳು ರಭಸದಿಂದ ಬಂದರೆ, ಮಧ್ಯಾಹ್ನದ ಹೊತ್ತಿಗೆ ನೀರು ಆದಷ್ಟು ಹಿಂದೆ ಸಾಗಿ, ಸ್ವಲ್ಪ ಮುಂಚೆ ಇಲ್ಲಿ ನೀರಿತ್ತೋ ಅನ್ನುವಂತೆ ಆರಾಮವಾಗಿ ನಡೆಯಬಹುದು. ಸಂಜೆಯ ವೇಳೆಗೆ ನೀರು ಮತ್ತೂ ಹಿಂದೆ ಹೋಗಿದ್ದು, ಕತ್ತಲಾದಂತೆ ಸಮುದ್ರಗಳಿಂದ ದೂರವಿದ್ದರೆ ಒಳ್ಳೆಯದು. ಇನ್ನೂ ಹಲವಾರು ಪ್ರವಾಸಿಗರ ನೆಚ್ಚಿನ ದ್ವೀಪಗಳಿವೆ. ಭಾರತದ ಭಾಗವಾದ ಅಂಡಮಾನ್ ದೂರದಲ್ಲಿದ್ದರೂ, ಪ್ರಾಮುಖ್ಯತೆ ಪಡೆದಿದೆ. ಜೀವಮಾನದಲ್ಲಿ ಒಂದು ಸಲ ಅಂಡಮಾನ್ ನೋಡಿ ಬನ್ನಿ, ಸಮುದ್ರದಾಟಗಳನ್ನು ಆಡಿ ದಣಿಯಿರಿ, ಇತಿಹಾಸವನ್ನು ಪುನಃ ಅಧ್ಯಯನ ಮಾಡಿ ಬನ್ನಿ. ಇಲ್ಲಿಯವರೇ ಅಲ್ಲಿರುವುದರಿಂದ ಅಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಭಾಷೆ ಹಿಂದಿ. ಸಸ್ಯಾಹಾರಿಗಳೂ ಚಿಂತಿಸಬೇಕಿಲ್ಲ, ನಮ್ಮಲ್ಲಿ ದೊರೆಯುವ ಎಲ್ಲಾ ವೈವಿಧ್ಯಮಯ ಆಹಾರಗಳು ಅಲ್ಲೂ ದೊರಕುತ್ತದೆ. ಕೆಲವೊಂದು ಮೊಬೈಲ್ ನೆಟ್ವರ್ಕ್'ಗಳು ಕೆಲಸ ಮಾಡಲ್ಲ, ಸಾಮಾನ್ಯವಾಗಿ ಹೋಟೆಲುಗಳಲ್ಲಿ ವೈ-ಫೈ ಇರುವುದರಿಂದ ಅದೇನು ಅಷ್ಟೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸೋಲ್ಲ. ಹೀಗೆ ಯಾವುದಕ್ಕೂ ಕುಂದುಕೊರತೆಯಾಗದಂತೆ ಅತಿಥಿಗಳನ್ನು ಸತ್ಕರಿಸುವ ಅಂಡಮಾನ್ ನೆಚ್ಚಿನ ತಾಣವಾಗುವುದರಲ್ಲಿ ಸಂಶಯವಿಲ್ಲ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...